ಬೆಂಗಳೂರು: ಇತ್ತ ವಿಧಾನ ಪರಿಷತ್ ಚುನಾವಣೆ ಸಮೀಪಿಸುತ್ತಿದ್ದ ಹಾಗೇ ಸ್ಥಳೀಯ ಮುಖಂಡರ ಪಕ್ಷಾಂತರ ಭರಾಟೆಯೂ ಜೋರಾಗಿದೆ.
ಸಿಎಂ ಸಮ್ಮುಖದಲ್ಲಿ ಶನಿವಾರ ಬೆಳಗ್ಗೆ ಕೋಲಾರ ಸ್ಥಳೀಯ ಕಾಂಗ್ರೆಸ್ ಮುಖಂಡರು ಬಿಜೆಪಿ ಪಕ್ಷ ಸೇರ್ಪಡೆಗೊಂಡರೆ, ಸಂಜೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಬಿಜೆಪಿ ಮುಖಂಡರಾದ ಕೂಡ್ಲಗಿ ಮತ್ತು ಕೊಟ್ಟೂರು ತಾಲೂಕು ಪಂಚಾಯ್ತಿಯ ಮಾಜಿ ಅಧ್ಯಕ್ಷ ವೆಂಕಟೇಶ್ ನಾಯ್ಕ, ಸದಸ್ಯರಾದ ಪಾಲಕ್ಷಿ, ಓಬಣ್ಣ, ಮಾರಪ್ಪ, ಹುಲಗಪ್ಪ ಹಾಗೂ ಚಂದ್ರಪ್ಪ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಚಂದ್ರ ರೆಡ್ಡಿ, ಕೆ.ಜಿ.ಎಫ್ ವಿಧಾನಸಭಾ ಕ್ಷೇತ್ರದ ಶ್ರೀನಿವಾಸ್ ಹಾಗೂ ಬಂಗಾರಪೇಟೆ ಕ್ಷೇತ್ರದ ಕಪಾಲಿ ಶ್ರೀನಿವಾಸ್ ರವರು ಮುಖ್ಯಮಂತ್ರಿಗಳ ಸಮುಖದಲ್ಲಿ ಕಾಂಗ್ರೆಸ್ ತೊರೆದು ಸಚಿವ ಸುಧಾಕರ್ ಹಾಗೂ ಸಚಿವ ಮುನಿರತ್ನ ಅವರ ನೇತೃತ್ವದಲ್ಲಿ ಶನಿವಾರ ಬಿ.ಜೆ.ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.ಆ ಮೂಲಕ ಸ್ಥಳೀಯ ಮುಖಂಡರನ್ನು ಸೆಳೆಯುವ ಪ್ರಯತ್ನವನ್ನು ಎರಡೂ ಪಕ್ಷಗಳು ಮಾಡುತ್ತಿವೆ. ಸ್ಥಳೀಯ ಮಟ್ಟದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಆಪರೇಷನ್ ನಡೆಯುತ್ತಿದೆ.