ಬೆಂಗಳೂರು : ರಾಜರಾಜೇಶ್ವರಿನಗರ ಉಪಚುನಾವಣೆ ಹಿನ್ನೆಲೆ ಜೆಪಿ ಪಾರ್ಕ್ ಬಳಿ ಇರುವ ಮುತ್ಯಾಲ ನಗರದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ ಮಾಡಲಾಯಿತು. ಸಂಸದ ಡಿಕೆ ಸುರೇಶ್, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಭೈರತಿ ಸುರೇಶ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರಿಂದ ಉದ್ಘಾಟನೆ ನೆರವೇರಿತು. ಬಳಿಕ ಕಾಂಗ್ರೆಸ್ ನಾಯಕರು ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು.
ಕಚೇರಿ ಉದ್ಘಾಟನೆ ನಂತರ ಮಾತನಾಡಿದ ಸಂಸದ ಡಿಕೆ ಸುರೇಶ್, ಯಡಿಯೂರಪ್ಪ ಅವರನ್ನ ಕೆಳಗಿಳಿಸಲು ಯಾರು ಯಾರು ಮೀರ್ ಸಾದಿಕ್ ಕೆಲಸ ಮಾಡ್ತಿದ್ದಾರೆ ಅನ್ನೋದು ಗೊತ್ತಿದೆ. ಹೇಳಿದವರು ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ಮಿತ್ರ ಮಂಡಳಿ ಏನೆಲ್ಲಾ ಲೋಟಿ ಮಾಡಿದ್ದಾರೆ ಅನ್ನೋದು ಗೊತ್ತಿದೆ. ಅಷ್ಟ ದಿಕ್ಪಾಲಕರು ಕೊರೊನಾ ನೆಪದಲ್ಲಿ 2000 ಕೋಟಿ ಲೂಟಿ ಮಾಡಿದ್ದಾರೆ. ಇದು ಲೂಟಿ ಸರ್ಕಾರ ಅಂತ ವಾಗ್ದಾಳಿ ನಡೆಸಿದರು.
ಒಂದು ಕಡೆ ನೆರೆ ಮತ್ತು ಬರದ ಜತೆ ಕೊರೊನಾ ಇದೆ. ಮೋದಿ ಮುಂದೆ ಪರಿಹಾರ ಕೇಳುವುದಕ್ಕೆ ಸಂಸದರು ಸೇರಿದಂತೆ ಯಾರೊಬ್ಬರಿಗೂ ಧೈರ್ಯ ಇಲ್ಲ. ಸಚಿವರಿಗೂ ಇಲ್ಲ. ಯಡಿಯೂರಪ್ಪ ವಿರುದ್ಧ ಮೀರ್ ಸಾದಿಕ್ ನಾಯಕತ್ವ ವಹಿಸುವವರೇ ಇಂದು ಮಾತನಾಡಿರುವವರು. ನಾನು ಅವರ ಬಗ್ಗೆ ಮಾತನಾಡಲ್ಲ ಎಂದರು.
ಡಿಸಿಎಂಗೆ ಏಕವಚನದಲ್ಲಿ ವಾಗ್ದಾಳಿ:
ದೇವರ ಮುಂದೆ ಪ್ರಮಾಣ ಮಾಡ್ಲಿ ಅಂತ ಡಿಸಿಎಂ ಅಶ್ವಥ್ ನಾರಾಯಣ ಹೇಳಿಕೆಗೆ ಗರಂ ಆಗಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಸುರೇಶ್, ಡಿಕೆ ಶಿವಕುಮಾರ್ಗೆ ಪ್ರಮಾಣ ಮಾಡುವಂತೆ ಕೇಳಲು ಇವನಿಗೆ ಯಾವ ಯೋಗ್ಯತೆ ಇದೆ. ನಾನು ಡಿಸಿಎಂ ಅಂತ ಗೌರವ ಕೊಟ್ಟು ಮಾತನಾಡುತ್ತಿರಲಿಲ್ಲ. ಅವನಿಗೆ ಮಾನ ಮರ್ಯಾದೆ ಇದೀಯಾ. ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದು ಹೇಳಿದರು.