ಬೆಂಗಳೂರು: ಕನಕಪುರದ ಬಂಡೆಯನ್ನು ಪುಡಿ ಮಾಡುವ ಡೈನಮೈಟ್ಗಳು ನಮ್ಮ ಬಳಿ ಇವೆ. ಗೂಂಡಾಗಿರಿಯ ರಾಜಕಾರಣವನ್ನು ಆರ್.ಆರ್.ನಗರ ಕ್ಷೇತ್ರದ ಜನರು ಒಪ್ಪಲ್ಪವೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಐವರು ಕಾಂಗ್ರೆಸ್ ಕಾರ್ಪೊರೇಟರ್ಗಳು ಸೇರಿದಂತೆ ಕಾಂಗ್ರೆಸ್ನ ಹಲವು ಮುಖಂಡರು ಇಂದು ಪಕ್ಷ ತೊರೆದು ಬಿಜೆಪಿ ಸೇರಿದರು. ಮಲ್ಲೇಶ್ವರಂನ ಖಾಸಗಿ ಹೋಟೆಲ್ನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪಕ್ಷದ ಬಾವುಟ ನೀಡುವ ಮೂಲಕ ಅವರನ್ನು ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಕಟೀಲ್, ಎಲ್ಲೆಲ್ಲಿಂದಲೋ ಬಂದು ಇಲ್ಲಿ ಗೂಂಡಾಗಿರಿ ರಾಜಕಾರಣ, ವಸೂಲಾತಿ ಮಾಡುತ್ತಾರೆ. ಇಲ್ಲಿನ ಜನ ಅದನ್ನು ಒಪ್ಪುವುದಿಲ್ಲ. ನಿಮ್ಮ ಬಳಿ ಬಂಡೆ ಇರಬಹುದು, ಆದರೆ ನಮ್ಮ ಬಳಿ ಕಾಂಗ್ರೆಸ್ನಿಂದ ಹೊರಬಂದ ಡೈನಮೈಟ್ಗಳು ಇದ್ದಾರೆ. ಕಾಂಗ್ರೆಸ್ನಿಂದ ಬಂದಿರುವ ಒಬ್ಬೊಬ್ಬರು ಒಂದೊಂದು ಡೈನಮೈಟ್ಗಳಾಗಿದ್ದಾರೆ. ಈಗ ಬಂಡೆಯನ್ನು ಪುಡಿ ಮಾಡುವ ಡೈನಮೈಟ್ಗಳು ನಮ್ಮ ಬಳಿ ಇವೆ. ನಿಮ್ಮ ಕಾಂಗ್ರೆಸ್ ಮನೆ ಖಾಲಿಯಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ಗೆ ನೇರ ಟಾಂಗ್ ನೀಡಿದರು.
ನಮಗೆ ಯಾವ ಬಂಡೆಯೂ ಲೆಕ್ಕಕ್ಕಿಲ್ಲ. ನಮ್ಮ ಸಾಮ್ರಾಟ ಹಾಗೂ ಅರವಿಂದ ಲಿಂಬಾವಳಿ ಚುನಾವಣಾ ಕಾರ್ಯ ನಿರ್ವಹಿಸಿದ್ದಾರೆ. ಇಲ್ಲಿ ನಮ್ಮ ಗೆಲುವು ಶತಃಸಿದ್ಧ. ನಮ್ಮ ಜೋಡೆತ್ತುಗಳು ಓಡಲಿವೆ, ಮುನಿರತ್ನ ಗೆಲುವಿನ ಧ್ವಜ ಹಾರಿಸಲಿದ್ದಾರೆ. ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದು ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಭ್ರಷ್ಟಾಚಾರದ ಬಗ್ಗೆ ಬಹಳಷ್ಟು ಮಾತನಾಡುತ್ತಾರೆ. ಆದರೆ, ತಿಹಾರ್ ಜೈಲಿಗೆ ಹೋಗಿ, ನೀವು ಇತಿಹಾಸ ಓದಿದ್ದೀರಾ ಅಥವಾ ಬರೆದಿರಾ..? ಜೈಲಿಗೆ ಹೋಗಿದ್ದು, ಹೊರ ಬಂದಾಗ ಮೆರವಣಿಗೆ ಮಾಡಿದ್ದೆಲ್ಲವನ್ನು ಜನ ನೋಡಿದ್ದಾರೆ. ನಿಮ್ಮ ಮೆರವಣಿಗೆ ಇನ್ನು ಸಾಕು, ನೀವು ಮನೆಯಲ್ಲಿ ಕುಳಿತುಕೊಳ್ಳಿ ಎಂದು ಹೇಳಲು ಜನ ಸಿದ್ಧರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪನವರ ಆಡಳಿತ ನೋಡಿ ಜನ ಮತ ಹಾಕಲಿದ್ದಾರೆ. ಇಲ್ಲಿ ನಮ್ಮ ಗೆಲುವು ಖಚಿತ ಎಂದು ಭವಿಷ್ಯ ನುಡಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾತನಾಡಿ, ಜೈಲಿಗೆ ಹೋಗಿ ಬಂದವರನ್ನು ಬಂಡೆ ಎನ್ನುತ್ತಾರೆ. ಅದು ಬಂಡೆ ಅಲ್ಲ ಭಂಡತನ, ಜೈಲಿಗೆ ಹೋಗಿ ಬಂದು ಮೆರವಣಿಗೆ ಮಾಡಿಕೊಳ್ಳುವುದು ಭಂಡತನ ಅಲ್ಲದೆ ಬೇರೇನು..?. ನೀವೇನು ಸ್ವಾತಂತ್ರ್ಯ ಹೋರಾಟಕ್ಕಾಗಿ ಜೈಲಿಗೆ ಹೋಗಿದ್ರಾ..?. ಹಿಂದುತ್ವಕ್ಕಾಗಿ ಜೈಲಿಗೆ ಹೋಗಿದ್ರಾ...?. ಭ್ರಷ್ಟಾಚಾರ ಕಾರಣಕ್ಕೆ ಜೈಲಿಗೆ ಹೋಗಿದ್ದಾರೆ. ತಲೆತಗ್ಗಿಸುವ ವಿಚಾರಕ್ಕೆ ಸಂಭ್ರಮ ಎಂದು ಯಾರೂ ಭಾವಿಸಲ್ಲ. ಆದರೆ, ಕಾಂಗ್ರೆಸ್ನ ಕೆಲವರು, ಅದನ್ನು ಸಂಭ್ರಮ ಎಂದು ಭಾವಿಸಿದರು ಎಂದು ಡಿಕೆಶಿ ವಿರುದ್ಧ ಹರಿಹಾಯ್ದರು.
ನಾವು ಜಾತಿ ರಾಜಕೀಯ ಮಾಡಿಲ್ಲ. ನಾನು ಒಕ್ಕಲಿಗ ಅಲ್ಲವೇ..? ಆರ್. ಅಶೋಕ್ ಒಕ್ಕಲಿಗ ಅಲ್ಲವೇ..? ನಾಯಕರನ್ನ ಮುಗಿಸಿ, ನಾವು ರಾಜಕಾರಣ ಮಾಡಲ್ಲ. ಹಾಗಿದ್ದರೆ ಸುಧಾಕರ್, ಯೋಗೇಶ್ವರ್, ಸೋಮಶೇಖರ್ ಯಾಕೆ ಪಾರ್ಟಿ ಬಿಡುತ್ತಿದ್ದರು..?. ಜೊತೆಯಲ್ಲಿರುವ ನಾಯಕರನ್ನು ಮುಗಿಸುವುದರಿಂದ ನಾಯಕತ್ವ ಬರುವುದಿಲ್ಲ. ನಾಯಕತ್ವ ಎನ್ನುವುದು ಬೆಳೆಸುವುದರಿಂದ ಬರಲಿದೆ. ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಎಷ್ಟು ಗೆದ್ದಿದೆ..?. ಅವರೊಬ್ಬರೇ ಗೆದ್ದಿರೋದು, ನಮ್ಮ ಕಡೆ ಅಂತಹವರನ್ನು ಹಾಳೂರಿಗೆ ಉಳಿದೋನು ಒಬ್ಬನೇ ಗೌಡ ಎಂದು ಕರೆಯುತ್ತೇವೆ. ಬಡ್ಡಿ ದುಡ್ಡು ಖಾಲಿ ಮಾಡಿಸಲು, ಆ ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ನಮ್ಮ ಅಭ್ಯರ್ಥಿ ಮುನಿರತ್ನ ಅವರು ಇಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಹಾಗಾಗಿ ನಮ್ಮ ಗೆಲುವು ಖಚಿತ ಎಂದರು.
ವೇದಿಕೆಯಲ್ಲಿ ಸಚಿವ ಆರ್.ಅಶೋಕ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ಅಭ್ಯರ್ಥಿ ಮುನಿರತ್ನ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.