ಬೆಂಗಳೂರು: ಬಿಶೋಪ್ ಕಾಟನ್ ವಿದ್ಯಾ ಸಂಸ್ಥೆ ಕೋಟ್ಯಂತರ ರೂಪಾಯಿ ಸೇವಾ ಹಾಗೂ ಆಸ್ತಿ ತೆರಿಗೆ ವಂಚನೆ ಮಾಡಿದ್ದು, ಪಾಲಿಕೆಯ ಅಧಿಕಾರಿಗಳು ನಿರ್ಲಕ್ಷ ಧೋರಣೆ ತಾಳಿದ್ದಾರೆ. ಇವರುಗಳ ವಿರುದ್ಧ ತಕ್ಷಣವೇ ಕ್ರಮ ಜರುಗಿಸಬೇಕೆಂದು ಆರೋಪಿಸಿ ಮಾಜಿ ಪಾಲಿಕೆ ಆಡಳಿತ ಪಕ್ಷದ ಮುಖಂಡರು, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್ ರಮೇಶ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಬಿಬಿಎಂಪಿ ಕೇಂದ್ರ ಕಛೇರಿಗೆ ಹೊಂದಿಕೊಂಡಂತೆಯೇ ಇರುವ ಚರ್ಚ್ ಆಫ್ ಸೌತ್ ಇಂಡಿಯಾ ಎಂಬ ಹೆಸರಿನಲ್ಲಿರುವ 27 ಎಕರೆ ವಿಸ್ತೀರ್ಣದ ಸ್ವತ್ತಿನ ಪೈಕಿ ಸುಮಾರು 04 ಎಕರೆಗಳಷ್ಟು ವಿಸ್ತೀರ್ಣದಲ್ಲಿರುವ ಬಿಶೋಪ್ ಕಾಟನ್ ಪದವಿ ಕಾಲೇಜು ಮತ್ತು ಕಾನೂನು ಕಾಲೇಜುಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಳೆದ 12 ವರ್ಷಗಳಿಂದಲೂ ಆಸ್ತಿ ತೆರಿಗೆಯನ್ನೇ ಪಾವತಿ ಮಾಡದಿರುವ ಅಂಶ ಬೆಳಕಿಗೆ ಬಂದಿದೆ.
2008-09 ರಿಂದ 2016-17ರ ವರೆಗೆ ಕೇವಲ ಶೇ. 25ರಷ್ಟು ಸೇವಾ ತೆರಿಗೆಯನ್ನು ಮಾತ್ರವೇ ಪಾವತಿಸಿರುವ ಬಿಶೋಪ್ ಕಾಟನ್ ಕಾಲೇಜು ಆಡಳಿತ ಮಂಡಳಿಯು, 2017-18 ರಿಂದ ಈವರೆಗೆ ಸೇವಾ ತೆರಿಗೆಯನ್ನೂ ಸಹ ಪಾವತಿಸಿರುವುದಿಲ್ಲ.
04 ಎಕರೆಗಳಷ್ಟು ವಿಸ್ತೀರ್ಣದ ಈ ಜಾಗದಲ್ಲಿ ಸುಮಾರು 96,070 ಚ.ಅಡಿಗಳಷ್ಟು ವಿಸ್ತೀರ್ಣದ ಕಾಲೇಜು ಕಟ್ಟಡವೂ ಇದೆ. ಎ ಝೋನ್ ವ್ಯಾಪ್ತಿಯಲ್ಲಿರುವ ಈ ಕಾಲೇಜಿನ 96,070 ಚ.ಅಡಿಗಳಷ್ಟು ವಿಸ್ತೀರ್ಣದ ಒಟ್ಟು ನಿರ್ಮಿತ ಪ್ರದೇಶಕ್ಕೆ ಪಾಲಿಕೆಯು ವಾಣಿಜ್ಯ ಕಟ್ಟಡಗಳಿಗೆ ನಿಗದಿಪಡಿಸಿರುವಂತೆ ವಾರ್ಷಿಕವಾಗಿ ಪ್ರತಿಯೊಂದು ಚ. ಅಡಿ ವಿಸ್ತೀರ್ಣದ ಕಟ್ಟಡಕ್ಕೆ 12.50 ರೂ. ಗಳಂತೆ ಒಟ್ಟು 31,29,060 ರೂಪಾಯಿ ಮೊತ್ತದ ವಾರ್ಷಿಕ ಆಸ್ತಿ ತೆರಿಗೆಯನ್ನು ಪಾಲಿಕೆಗೆ ಪಾವತಿಸಬೇಕಿರುತ್ತದೆ.
2008-09 ರಿಂದ 2016-17ರ ವರೆಗೆ ಶೇ. 25 ರಷ್ಟು ಸೇವಾ ತೆರಿಗೆಯನ್ನು ಮಾತ್ರವೇ ಪಾವತಿಸಿರುವ ಬಿಶೋಪ್ ಕಾಟನ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯು ಈವರೆವಿಗೆ ಆಸ್ತಿ ತೆರಿಗೆಯನ್ನೇ ಪಾವತಿಸದೇ ಪಾಲಿಕೆಗೆ ಹತ್ತಾರು ಕೋಟಿ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೇವಲ 2017-18 ರಿಂದ 2020-21ರ ವರೆಗಿನ 04 ವರ್ಷಗಳ ಅವಧಿಗೆ ಮಾತ್ರವೇ ಒಟ್ಟು 1,25,16,240 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತದ ಆಸ್ತಿ ತೆರಿಗೆಯನ್ನು ಈ ಸಂಸ್ಥೆಯು ಪಾಲಿಕೆಗೆ ಪಾವತಿಸಬೇಕಿರುತ್ತದೆ.
ಸಾವಿರಾರು ವಿದ್ಯಾರ್ಥಿಗಳನ್ನು ಹೊಂದಿರುವ ಬಿಶೋಪ್ ಕಟಾನ್ ಮಹಿಳಾ ಕಾಲೇಜು ಮತ್ತು ಕಾನೂನು ಕಾಲೇಜಿನ ಆಡಳಿತ ಮಂಡಳಿಯು ಪ್ರತಿಯೊಬ್ಬ ವಿದ್ಯಾರ್ಥಿಯಿಂದ ವಾರ್ಷಿಕವಾಗಿ ಲಕ್ಷಾಂತರ ರೂಪಾಯಿಯಷ್ಟು ವಾರ್ಷಿಕ ಶುಲ್ಕವನ್ನು ವಸೂಲಿ ಮಾಡುತ್ತಿದ್ದರೂ ಆಡಳಿತ ಮಂಡಳಿಯವರು ಆಸ್ತಿ ತೆರಿಗೆ ರಿಯಾಯಿತಿಯನ್ನು ಕೇಳಿರುತ್ತಾರೆ.
ಸರ್ಕಾರಿ ಅನುದಾನಿತ ಶಾಲಾ ಕಾಲೇಜುಗಳಿಗೆ ‘ಆಸ್ತಿ ತೆರಿಗೆ ರಿಯಾಯಿತಿ’ ನೀಡದ ಪಾಲಿಕೆಯು ಇಂತಹ ದೊಡ್ಡ ಮಟ್ಟದ ವಾಣಿಜ್ಯ ಉದ್ದೇಶಿತ ಕಾಲೇಜುಗಳಿಗೆ ಆಸ್ತಿ ತೆರಿಗೆ ರಿಯಾಯಿತಿ ನೀಡುವುದು ಸರಿಯಲ್ಲ ಎಂದು ದೂರಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಈ ಸಂಸ್ಥೆಗೆ ತೆರಿಗೆ ರಿಯಾಯಿತಿ ನೀಡಿದೆ ಆದಲ್ಲಿ, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಇಂತಹುದೇ ನೂರಾರು ಖಾಸಗಿ ಶಿಕ್ಷಣ ಸಂಸ್ಥೆಗಳೂ ಸಹ ಆಸ್ತಿ ತೆರಿಗೆ ರಿಯಾಯಿತಿ ಕೋರಿ ಅರ್ಜಿ ಸಲ್ಲಿಸಬಹುದು ಅಥವಾ ತಮ್ಮ ಶಿಕ್ಷಣ ಸಂಸ್ಥೆಗಳಿಗೂ ತೆರಿಗೆ ರಿಯಾಯಿತಿ ನೀಡುವಂತೆ ಪಾಲಿಕೆಗೆ ಆದೇಶಿಸುವಂತೆ ಕೋರಿ ನ್ಯಾಯಾಲಯಗಳ ಮೆಟ್ಟಿಲೇರುತ್ತಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಎಲ್ಲ ಕಾರಣಗಳಿಂದ, 2008 ರಿಂದ ಈವರೆಗೆ ಬಿಶೋಪ್ ಕಟಾನ್ ಆಡಳಿತ ಮಂಡಳಿಯು ಪಾವತಿಸಬೇಕಿರುವ ಆಸ್ತಿ ತೆರಿಗೆಯನ್ನು ಪಾಲಿಕೆಯ ನಿಯಮಾವಳಿಗಳಂತೆ ಬಡ್ಡಿ ಸಹಿತವಾಗಿ ವಸೂಲಿ ಮಾಡುವ ಸಂಬಂಧ ಕ್ರಮ ತೆಗೆದುಕೊಳ್ಳಬೇಕೆಂದು ಪಾಲಿಕೆಯ ಆಡಳಿತಾಧಿಕಾರಿಗಳನ್ನು, ಮಾನ್ಯ ಆಯುಕ್ತರನ್ನು ಮತ್ತು ಕಂದಾಯ ವಿಭಾಗದ ವಿಶೇಷ ಆಯುಕ್ತರನ್ನು ಆಗ್ರಹಿಸಿದ್ದಾರೆ.