ಬೆಂಗಳೂರು: ಬಿಜೆಪಿ ಕರ್ನಾಟಕ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಮಲ್ಲೇಶ್ವರಂನ ಹವ್ಯಕ ಮಹಾಸಭಾ ಸಭಾಂಗಣದಲ್ಲಿ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್, ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಹಿಂದುಳಿದ ವರ್ಗಗಳ ಬಿಜೆಪಿ ರಾಜ್ಯಾಧ್ಯಕ್ಷ ನೆ.ಲ.ನರೇಂದ್ರ ಬಾಬು ಮತ್ತು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಭಾಗವಹಿಸಿ ದೀಪ ಬೆಳಗಿಸುವ ಮೂಲಕ ಸಭೆ ಉದ್ಘಾಟಿಸಿದರು.
ನೆ.ಲ.ನರೇಂದ್ರ ಬಾಬು ಮಾತನಾಡಿ, ಸಂಘಟನೆ ಹಾಗೂ ಸರ್ಕಾರದ ಕಾರ್ಯಕ್ರಮ ಪ್ರತಿ ಮನೆಗೆ ತಲುಪಬೇಕು. ಪ್ರಧಾನಿ ನರೇಂದ್ರ ಮೋದಿ ಕಂಡ ಕನಸು ಅತ್ಮ ನಿರ್ಭರ ಭಾರತ ಸಾಕಾರಗೊಳಿಸಲು ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕು. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಭಿವೃದ್ಧಿ ಚಿಂತನೆಗಳು ನಾಡಿಗೆ ತಲುಪಬೇಕು. ರಾಜ್ಯದಲ್ಲಿ ಶೇ. 64ರಷ್ಟು ಹಿಂದುಳಿದ ವರ್ಗಗಳ ಜನಸಂಖ್ಯೆ ಇದೆ. ಹಿಂದುಳಿದ ವರ್ಗಗಳ ಸಮಾಜ ಮುಂಚೂಣಿಗೆ ಬರಬೇಕು. ಆಗ ಮಾತ್ರ ದೇಶ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ನಂತರ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಧ್ವನಿ ಇಲ್ಲದೇ ಇರುವ ಹಿಂದುಳಿದ ವರ್ಗದ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಹಿಂದುಳಿದ ವರ್ಗದವರು ಎಲ್ಲರೂ ಒಗ್ಗಟ್ಟಾಗಬೇಕು. ಕೇಂದ್ರ ಸರ್ಕಾರ ತಂದಿರುವ ಕೃಷಿ ಮಸೂದೆ ವಿರುದ್ಧ ಹೋರಾಟ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ತನ್ನ ಬೆಳೆಯ ಮಾರಟದ ಹಕ್ಕನ್ನು ರೈತನಿಗೆ ನೀಡಿದೆ. ಬಿಜೆಪಿ ಕಾರ್ಯಕರ್ತರು ಕೃಷಿ ಮಸೂದೆ ಲಾಭಂಶವನ್ನು ಪ್ರತಿಯೊಬ್ಬ ರೈತರಿಗೆ ಮುಟ್ಟುವಂತೆ ಮಾಡಬೇಕು. ಮಾಜಿ ಪ್ರಧಾನಿ ವಾಜಪೇಯಿ ಮತ್ತು ಎಲ್.ಕೆ.ಆಡ್ವಾಣಿಯವರು ಕಂಡ ಕನಸು ಇಂದು ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಭಾರತ ನಿರ್ಮಾಣವಾಗುತ್ತಿದೆ ಎಂದರು.
ಸಚಿವ ಭೈರತಿ ಬಸವರಾಜ್ ಮಾತನಾಡಿ, ಹಿಂದುಳಿದ ವರ್ಗದಲ್ಲಿ ಜನಿಸಿ, ಗ್ರಾಮ ಪಂಚಾಯಿತಿಯಿಂದ ಇಂದು ಸಚಿವನಾಗಿ ಕಾರ್ಯನಿರ್ವಹಿಸಿದ ಬಗ್ಗೆ ಹೆಮ್ಮೆಯಾಗುತ್ತಿದೆ. ರಾಜ್ಯದ ಹೆಚ್ಚಿನ ಜನಸಂಖ್ಯೆಯಲ್ಲಿ ಹಿಂದುಳಿದ ವರ್ಗದವರು ಇದ್ದಾರೆ. ಆಯಾ ಕ್ಷೇತ್ರದಲ್ಲಿ ಸಂಘಟನೆ ಮಾಡಿ, ಮುಂದಿನ ಬಜೆಟ್ನಲ್ಲಿ ಹಿಂದುಳಿದ ವರ್ಗದ ಜನರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.