ಬೆಂಗಳೂರು: ಬಿಜೆಪಿ ಆಪರೇಷನ್ ಕಮಲ ಮುಂದುವರೆಸಿದೆ. ನಮ್ಮ ರಾಜ್ಯಸಭಾ ಸದಸ್ಯ ಕೆ ಸಿ ರಾಮಮೂರ್ತಿ ಅವರಿಗೆ ಬಿಜೆಪಿಯವರೇ ಒತ್ತಡ ಹೇರಿದ್ದಾರೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಆರೋಪಿಸಿದ್ದಾರೆ.
ರಾಜ್ಯಸಭಾ ಸದಸ್ಯ ಕೆ ಸಿ ರಾಮಮೂರ್ತಿ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಉಗ್ರಪ್ಪ, ಐಟಿ ಭಯ ತೋರಿಸಿ ಬಿಜೆಪಿ ನಾಯಕರು ಹೆದರಿಸಿದ್ದಾರೆಂಬ ಮಾಹಿತಿಯಿದೆ. ಹೀಗಾಗಿಯೇ ಅವರು ಈ ನಿರ್ಧಾರ ಮಾಡಿರಬಹುದು. ಕಾನೂನು ಚೌಕಟ್ಟಿನಲ್ಲಿ ಕ್ರಮಕೈಗೊಳ್ಳಲಿ. ರಾಜಕೀಯ ವ್ಯವಸ್ಥೆ ಬುಡಮೇಲು ಮಾಡಿದರೆ ಸರಿಯಲ್ಲ ಎಂದರು.
ದೇಶದ ಜನ ಬಹಳ ಬುದ್ಧಿವಂತರಿದ್ದಾರೆ. ಸಮಯ ಬಂದಾಗ ಜನರೇ ಬುದ್ಧಿ ಕಲಿಸ್ತಾರೆ ಎಂದರು. ರಾಮಮೂರ್ತಿ ರಾಜೀನಾಮೆ ಬಿಜೆಪಿಯ ಮತ್ತೊಂದು ರೀತಿಯ ಆಪರೇಷನ್ ಕಮಲ. ರಾಮಮೂರ್ತಿ ರಾಜೀನಾಮೆ ನೀಡಿರುವ ವಿಚಾರ ತಿಳಿದ ತಕ್ಷಣ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ, ಸಾಧ್ಯವಾಗಿಲ್ಲ. ಅವರ ಹತ್ತಿರದ ಸಂಬಂಧಿಗಳ ಮಾಹಿತಿ ಪ್ರಕಾರ ರಾಜೀನಾಮೆಗೆ ಬಿಜೆಪಿಯವರು ನೀಡಿದ ಒತ್ತಡವೇ ಕಾರಣ. ನನ್ನ ಪ್ರಕಾರ ಭಾರತೀಯ ಜನತಾ ಪಕ್ಷ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳು ಮಾಡುವ ಯತ್ನ ಮಾಡುತ್ತಿದೆ. ಈ ಪ್ರಜಾಪ್ರಭುತ್ವ ವಿರೋಧಿ ನಿಲುವನ್ನು ರಾಜ್ಯ ಹಾಗೂ ರಾಷ್ಟ್ರದ ಜನರು ಅರ್ಥಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.