ಬೆಂಗಳೂರು:ʼಸಮೃದ್ಧ ಕರ್ನಾಟಕಕ್ಕೆ ಬಿಜೆಪಿಯೇ ಭರವಸೆʼ ಎಂಬ ಘೋಷಣೆಯಡಿ ಜನರ ಬಳಿ ಹೋಗುತ್ತೇವೆ. 224 ಕ್ಷೇತ್ರಗಳಲ್ಲಿ ಸಲಹೆ ಸ್ವೀಕರಿಸಿ, ಅಮೃತ ಕರ್ನಾಟಕ ಸೃಷ್ಟಿಸಲಿರುವ ಪ್ರಣಾಳಿಕೆ ಸಿದ್ದಪಡಿಸುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆ ಸಮಿತಿ ಸಂಚಾಲಕ ಡಾ.ಸುಧಾಕರ್ ತಿಳಿಸಿದ್ದಾರೆ. ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಡಬಲ್ ಎಂಜಿನ್ ಸರ್ಕಾರವಾಗಿ ಜನಪರ ಕೆಲಸ ಮಾಡುತ್ತಿದೆ. ಹಿಂದಿನ ಯುಪಿಎ ಸರ್ಕಾರಕ್ಕಿಂತ ಹೆಚ್ಚು ಅನುದಾನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಜ್ಯಕ್ಕೆ ನೀಡಿದೆ. ಈಗ ಸಮೃದ್ಧ ಕರ್ನಾಟಕ ನಿರ್ಮಿಸಲು ಜನರ ಅಭಿಪ್ರಾಯದೊಂದಿಗೆ ಬಿಜೆಪಿ ಪ್ರಣಾಳಿಕೆ ತಯಾರಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕನಿಷ್ಠ 50 ಸೆಕ್ಟರ್ ಸಭೆಗಳನ್ನು ಮಾಡಲಿದ್ದೇವೆ. ಕೃಷಿ, ತೋಟಗಾರಿಕೆ, ರೇಷ್ಮೆ ಮೊದಲಾದ ಕ್ಷೇತ್ರಗಳಲ್ಲಿ ರೈತರೊಂದಿಗೆ ಸಭೆ ನಡೆಸಿ ಸಲಹೆ ಪಡೆಯಲಾಗುವುದು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಯಲ್ಲೂ ಸಭೆ ನಡೆಸಿ, ಸಂಘಟನೆಗಳ ಸಲಹೆ ಪಡೆಯಲಾಗುವುದು. ಕೃಷಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರು ಬಂದು ಭಾಗಿಯಾಗುತ್ತಾರೆ. ವಿದೇಶಾಂಗ ನೀತಿಯ ವಿಷಯ ಬಂದಾಗ, ವಿದೇಶಾಂಗ ಸಚಿವರು, ಕೇಂದ್ರ ಆರ್ಥಿಕ ಸಚಿವರು ಬರುತ್ತಾರೆ ಎಂದು ಸುಧಾಕರ ಮಾಹಿತಿ ನೀಡಿದರು.
ವಾಟ್ಸ್ಆ್ಯಪ್ ನಂಬರ್ ಬಿಡುಗಡೆ: +91 8595158158 ನಂಬರ್ ಪ್ರಕಟಿಸಿದ ಸಚಿವರು, ಇದಕ್ಕೆ ಜನರು ಸಲಹೆ ಕಳುಹಿಸಬಹುದು. ಬಿಜೆಪಿಯ ಪ್ರತಿ ಮಂಡಲದಲ್ಲಿ 8 ಸಾವಿರ ಬಾಕ್ಸ್‌ಗಳನ್ನು ಇಟ್ಟು, ಅದರ ಮೂಲಕ ಸಲಹೆ ಪಡೆಯಲಾಗುವುದು. www.bjp4samruddhakarnataka.in ನಲ್ಲೂ ಸಲಹೆ ನೀಡಬಹುದು. ಕನಿಷ್ಠ ಒಂದು ಕೋಟಿ ಜನರನ್ನು ತಲುಪುವ ಗುರಿ ಇದೆ. ಮಾರ್ಚ್ 25 ರ ವರೆಗೆ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಿರಂತರ ಸಭೆ ಮಾಡಲಾಗುವುದು. ಕಲ್ಯಾಣ ಕರ್ನಾಟಕ, ಹಳೆ ಮೈಸೂರು, ಬೆಂಗಳೂರು ನಗರ ಮೊದಲಾದ ವಿಭಾಗಗಳಲ್ಲೂ ಸಲಹೆ ಪಡೆಯಲಾಗುವುದು. ಪ್ರಗತಿ ರಥಗಳಲ್ಲಿ ಸಲಹಾ ಪೆಟ್ಟಿಗೆ ಇಟ್ಟು, ಅಲ್ಲಿಂದಲೂ ಸಲಹೆ ಪಡೆಯಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
ಕಾಂಗ್ರೆಸ್‌ನವರು 173 ಭರವಸೆ ನೀಡಿ, ಶೇ.38 ರಷ್ಟು ಪೂರೈಸಿದ್ದು, ಶೇ.98 ರಷ್ಟು ಪೂರೈಸಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. ಅಂತಹ ಕೆಲಸವನ್ನು ಬಿಜೆಪಿ ಮಾಡುವುದಿಲ್ಲ. ಈ ಅವಧಿಯಲ್ಲಿ ಕೋವಿಡ್ ಇತ್ತು. ಅಲ್ಲದೇ, ಮೊದಲ ವರ್ಷ ಅಧಿಕಾರ ಸಿಕ್ಕಿರಲಿಲ್ಲ. ಆದರೂ ಬಿಜೆಪಿ ಉತ್ತಮ ಕೆಲಸ ಮಾಡಿದೆ. ಜನರು ಸ್ಪಷ್ಟ ಬಹುಮತವನ್ನು ಬಿಜೆಪಿಗೆ ನೀಡಿದರೆ, ನೂರಕ್ಕೆ ನೂರು ಭರವಸೆ ಈಡೇರಿಸುತ್ತೇವೆ ಎಂದು ಹೇಳಿದರು.
ರೈಲ್ವೆ ಇಲಾಖೆಗೆ ಹೆಚ್ಚು ಆದ್ಯತೆ:ರೈಲ್ವೆ ಇಲಾಖೆ ಬಗ್ಗೆ ಡಬಲ್ ಎಂಜಿನ್ ಸರ್ಕಾರ ವಿಶೇಷ ಒತ್ತು ನೀಡಿದೆ. ಯುಪಿಎ ಅವಧಿಗೆ ಹೋಲಿಸಿದರೆ, ಈ ಬಾರಿ ರೈಲ್ವೆ ಯೋಜನೆಗಳಿಗೆ 9 ಪಟ್ಟು ಹೆಚ್ಚು ಅನುದಾನ ಬಂದಿದೆ. ಉಪನಗರ ರೈಲು ಯೋಜನೆಗೆ ಹಿಂದಿನ ಸರ್ಕಾರ ಒತ್ತು ನೀಡಿರಲಿಲ್ಲ. ಅದನ್ನು ಬಿಜೆಪಿ ಸರ್ಕಾರ ಮಾಡಿದೆ. ಹಲವು ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಕೂಡ ಡಬಲ್ ಎಂಜಿನ್ ಸರ್ಕಾರದಿಂದ ಸಾಧ್ಯವಾಗಿದೆ. ರೈಲ್ವೆ ಯೋಜನೆಗಳಿಂದ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ರೈತರಿಗೆ ಲಾಭವಾಗಿದ್ದು, ಇವೆಲ್ಲವೂ ದೀರ್ಘಕಾಲದವರೆಗೆ ಅನುಕೂಲ ಕಲ್ಪಿಸುತ್ತವೆ ಎಂದರು.
1.6 ಲಕ್ಷ ಕೋಟಿ ಅನುದಾನ ನೀಡಿದ ಕೇಂದ್ರ: ಸೆಮಿ ಕಂಡಕ್ಟರ್ ಹೂಡಿಕೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಎಂಟು ವರ್ಷಗಳಲ್ಲಿ 1.6 ಲಕ್ಷ ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ಹೆದ್ದಾರಿ, ರಸ್ತೆ ಯೋಜನೆಗಳಿಗೆ ನೀಡಿದೆ. 4,000 ಕಿ.ಮೀ. ಉದ್ದದ ಹೆದ್ದಾರಿ ರಾಜ್ಯದಲ್ಲಿ ನಿರ್ಮಾಣವಾಗಿದೆ. 12 ಕೋಟಿ ಕೋವಿಡ್ ಡೋಸ್ ರಾಜ್ಯದಲ್ಲಿ ನೀಡಲಾಗಿದೆ. ಕೇಂದ್ರ ಬಿಜೆಪಿ ಸರ್ಕಾರವು ರಾಜ್ಯಕ್ಕೆ ನೀಡಿದ ಯೋಜನೆ ಹಾಗೂ ಅನುದಾನವನ್ನು ಕಾಂಗ್ರೆಸ್ ನೋಡಬೇಕು ಎಂದು ಸುಧಾಕರ್ ಟಾಂಗ್ ಕೊಟ್ಟರು.
ತವುಡು ಯಾರದ್ದು ಎಂದು ಗೊತ್ತಾಗಿದೆ:ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಕೆಜಿಗೆ 29 ರೂ. ನೀಡುತ್ತಿತ್ತು. ರಾಜ್ಯ ಸರ್ಕಾರ 3 ರೂ. ನೀಡುತ್ತಿತ್ತು. ಅಕ್ಕಿ ಚೀಲಕ್ಕೂ ಮೂರು ರೂ. ಇಲ್ಲ. ಸಿದ್ದರಾಮಯ್ಯ ತವುಡು ಕುಟ್ಟುವ ಬಗ್ಗೆ ಹೇಳಿದ್ದಾರೆ. ಭತ್ತ ಯಾರದ್ದು, ಅಕ್ಕಿ ಯಾರದ್ದು ತವುಡು ಯಾರದು ಎಂದು ಜನರಿಗೆ ಈಗ ಗೊತ್ತಾಗಿದೆ ಎಂದು ವ್ಯಂಗ್ಯವಾಗಿ ಕುಟುಕಿದರು.
ಮೀಸಲಾತಿ ಹೆಚ್ಚಳ:ಪರಿಶಿಷ್ಟರ ಮೀಸಲಾತಿ ಕುರಿತು ಕಾಂಗ್ರೆಸ್‌ನವರು ಭಾಷಣ ಮಾತ್ರ ಮಾಡುತ್ತಿದ್ದರು. ಆದರೆ, ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಿಸಲು ಕ್ರಮ ವಹಿಸಿದೆ. 1500 ಕ್ಕೂ ಅಧಿಕ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲಾಗಿದೆ. ಹಾಗೆಯೇ 50 ಸಾವಿರಕ್ಕೂ ಅಧಿಕ ಹಕ್ಕುಪತ್ರ ನೀಡಲಾಗಿದೆ. ದಾವಣಗೆರೆಯಲ್ಲೂ ಇದೇ ರೀತಿ ಹಕ್ಕುಪತ್ರ ನೀಡಲಾಗುತ್ತದೆ. ರಾಜ್ಯದ 59 ಲಕ್ಷ ರೈತರಿಗೆ ಪ್ರತಿ ವರ್ಷ 10 ಸಾವಿರ ರೂ. ನೀಡಲಾಗುತ್ತಿದೆ. ರೈತರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ರೈತ ವಿದ್ಯಾನಿಧಿ ನೀಡಿದ್ದಾರೆ. ಆದರೆ ಇದು ಪ್ರಣಾಳಿಕೆಯಲ್ಲಿ ಇರಲೇ ಇಲ್ಲ. ಈ ಯೋಜನೆಯಡಿ 11 ಲಕ್ಷ ರೈತರ ಮಕ್ಕಳಿಗೆ 460 ಕೋಟಿ ರೂ. ನೀಡಲಾಗಿದೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದರು.
ಇದನ್ನೂಓದಿ:ಸಿಂಧೂರಿ, ರೂಪಾ ಅಮಾನತಿಗೆ ವಿಶ್ವನಾಥ್ ಆಗ್ರಹ: ಬಿಗಿ ಕ್ರಮದ ಭರವಸೆ ನೀಡಿದ ಸರ್ಕಾರ