ಆನೇಕಲ್: ಚುನಾವಣೆ ಹತ್ತಿರ ಬರುತ್ತಿದೆ. ಇದಕ್ಕಾಗಿ ಬಿಜೆಪಿಯವರು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕೆಟ್ಟ ಹೆಸರು ತರಲು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ರಾಮಲಿಂಗರೆಡ್ಡಿ ದೂರಿದರು. ಆನೇಕಲ್ನಲ್ಲಿ ಸುದ್ದಿಗಾರರರೊಂದಿಗೆ ಅವರು ಮಾತನಾಡಿದರು.
ರಮೇಶ್ ಜಾರಕಿಹೊಳಿ ಅವರು ಹತಾಶೆಯಲ್ಲಿ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಇವರದ್ದೇ ಸರ್ಕಾರ ಇದೆ. ಸಿಡಿ ವಿಚಾರದ ಬಗ್ಗೆ ತನಿಖೆ ನಡೆಯಲಿ. ಸಹಕಾರ ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಮಾಡುತ್ತಿದ್ದಾರೆ. 1988ರಲ್ಲಿ ಡಿ.ಕೆ.ಶಿವಕುಮಾರ್ ಇನ್ನೂ ಶಾಸಕರಾಗಿರಲಿಲ್ಲ. ಹೀಗಾಗಿ, 30 ವರ್ಷಗಳ ನಂತರ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ, ವಿರೋಧಿಗಳ ಷಡ್ಯಂತ್ರ ಫಲಿಸಲ್ಲ: ನಾರಾಯಣ ಗೌಡ
ಈಗಾಗಲೇ ಅನೇಕ ಚುನಾವಣಾ ಸಮೀಕ್ಷೆಗಳ ಫಲಿತಾಂಶ ಹೊರಬಂದಿದೆ. ಬಿಜೆಪಿಯವರು ಸಹ ಸಮೀಕ್ಷೆ ಮಾಡಿಸಿದ್ದಾರೆ ಮತ್ತು ಹಲವು ಮಾಧ್ಯಮಗಳು ಸಮೀಕ್ಷೆ ನಡೆಸಿವೆ. ಸಮೀಕ್ಷೆಗಳಲ್ಲಿ ಬಿಜೆಪಿ 60 ರಿಂದ 70 ಸ್ಥಾನವನ್ನೂ ದಾಟುತ್ತಿಲ್ಲ. ಇದಕ್ಕಾಗಿ ಏನಾದರು ಮಾಡಿ ಚುನಾವಣೆಯಲ್ಲಿ ಗೆಲ್ಲಬೇಕೆಂದು ದೆಹಲಿ ನಾಯಕರು ಮತ್ತು ಇಲ್ಲಿನ ಸ್ಥಳೀಯ ನಾಯಕರು ಸೇರಿಕೊಂಡು ಡಿ.ಕೆ. ಶಿವಕುಮಾರ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.
ಕೆಲಸ ಮಾಡಿ ಮತ ಪಡೆದುಕೊಳ್ಳಬೇಕು ಎನ್ನುವ ಮನೋಭಾವ ಬಿಜೆಪಿ ಬಳಿ ಇಲ್ಲ. ಅದಕ್ಕಾಗಿ ಸಣ್ಣಪುಟ್ಟ ತಪ್ಪುಗಳನ್ನು ಹುಡುಕಿ ಇಮೇಜ್ ಡ್ಯಾಮೇಜ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯನವರ ಮೇಲೂ ಹೀಗೆ ಆರೋಪ ಮಾಡಿದ್ದರು ಎಂದು ದೂರಿದರು.
ಚುನಾವಣೆ ಹತ್ತಿರವಾಗುತ್ತಿರುವ ಕಾರಣ ತಿಂಗಳಿಗೆ ನಾಲ್ಕು ಬಾರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ಮತ್ತೆ ಅವರು ಕರ್ನಾಟಕದ ಕಡೆ ಮುಖ ಹಾಕುವುದಿಲ್ಲ. ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ವೋಟ್ ಕೇಳುತ್ತಿದೆ ಎಂದು ರಾಮಲಿಂಗ ರೆಡ್ಡಿ ಟೀಕಿಸಿದರು.
ಇದನ್ನೂ ಓದಿ: ಅಮೃತ ಕಾಲದ ಮೊದಲ ಬಜೆಟ್ ಮೂಲಕ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಭದ್ರ ಅಡಿಪಾಯ: ಮೋದಿ