ಬೆಂಗಳೂರು: "ವಿಧಾನಸೌಧದಲ್ಲಿ ನಡೆದಿದ್ದು ಅತ್ಯಂತ ದುರ್ದೈವದ ಘಟನೆ. ಪ್ರಜಾಪ್ರಭುತ್ವದ ಘನತೆವೆತ್ತ ಸದನಕ್ಕೆ ಬಿಜೆಪಿಯವರು ಅಪಮಾನ ಮಾಡಿದ್ದಾರೆ" ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಟೀಕಿಸಿದರು. ವಿಧಾನಸೌಧದಲ್ಲಿ ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಪ್ರೋಟೋಕಾಲ್ ಪ್ರಕಾರವೇ ರಾಷ್ಟ್ರೀಯ ನಾಯಕರಿಗೆ ವ್ಯವಸ್ಥೆ ಮಾಡಲಾಗಿತ್ತು. ಕೆಲವರನ್ನು ರಿಸೀವ್ ಮಾಡುವುದಕ್ಕೆ ಐಎಎಸ್ ಅಧಿಕಾರಿಗಳನ್ನು ಕೊಟ್ಟಿದ್ದೇವೆ" ಎಂದು ಹೇಳಿದರು.
"ಬಿಜೆಪಿ ಮೀಟಿಂಗ್ ಮಾಡಿದಾಗ ಅಧಿಕಾರಿಗಳನ್ನು ನಿಯೋಜಿಸಿಲ್ಲವೇ?. ಈಗ ನಾವು ಅತಿಥಿಗಳು ಅಂತ ಕೊಟ್ಟರೆ ತಪ್ಪೇ?. ಭಾಷಣ ಮಾಡಿ, ಟೀಕೆ ಮಾಡಿ. ಆದರೆ ನೀವು ಡೆಪ್ಯೂಟಿ ಸ್ಪೀಕರ್ ಎದುರು ನಡೆದುಕೊಂಡ ರೀತಿ ಸರಿಯಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, "ವಿಪಕ್ಷದವರಿಗೆ ಜವಾಬ್ದಾರಿ ಇಲ್ಲ. ನಿನ್ನೆ ಪ್ರತಿಪಕ್ಷದವರೆಲ್ಲ ಬಂದಿದ್ದರು. ಹಾಲಿ, ಮಾಜಿ ಎಲ್ಲರೂ ಇದ್ದರು. ಅವರಿಗೆ ಪ್ರೋಟೋಕಾಲ್ ಪ್ರಕಾರ ಸೆಕ್ಯೂರಿಟಿ ನೀಡಿದ್ದೆವು. ಇದಕ್ಕೆ ಬಿಜೆಪಿ ಎಡಬಿಡಂಗಿತನ ತೋರಿದ್ದಾರೆ" ಎಂದು ಕಿಡಿ ಕಾರಿದರು.
"ಹೊಸ ಸಂಸತ್ ಭವನ ಉದ್ಘಾಟನೆಯಾಯ್ತು. ಆಗ ಪುರೋಹಿತರನ್ನು ಅಲ್ಲಿಗೆ ಸ್ಪೆಷಲ್ ಫ್ಲೈಟ್ನಲ್ಲಿ ಕರೆದೊಯ್ದಿದ್ರು. ಕುಮಾರಸ್ವಾಮಿ ಪ್ರಮಾಣ ವಚನ ಮಾಡಿದ್ರು. ಆಗ ಅನೇಕರು ಇಲ್ಲಿಗೆ ಬಂದಿದ್ರಲ್ಲ. ಆಗ ಯಾಕೆ ಯಾರೂ ಕೇಳಲಿಲ್ಲ ಎಂದು ಪ್ರಶ್ನಿಸಿದರು. ಅತಿಥಿಗಳಿಗೆ ಗೌರವ ಕೊಡುವುದು ಇವರಿಗೆ ಬರಲ್ಲ. ಜನ ಚುನಾವಣೆಯಲ್ಲಿ ಮಂಗಳಾರತಿ ಎತ್ತಿದ್ದಾರೆ. ಮುಂದಿನ ಚುನಾವಣೆಯಲ್ಲೂ ಮಂಗಳಾರತಿ ಮಾಡ್ತಾರೆ" ಎಂದು ವಾಕ್ಸಮರ ನಡೆಸಿದರು.
ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಮಾತನಾಡಿ, "ಸದನದಲ್ಲಿ ನಡೆದ ಘಟನೆ ಕಪ್ಪು ಚುಕ್ಕೆ. ಯಾವುದೇ ವಿಚಾರದ ಬಗ್ಗೆ ಪ್ರತಿಪಕ್ಷಗಳು ಚರ್ಚೆ ಮಾಡಬಹುದು. ಆದರೆ ಉಪಸಭಾಧ್ಯಕ್ಷರ ಮೇಲೆ ಹಾಳೆಗಳನ್ನು ಹರಿದು ಎಸೆದಿದ್ದಾರೆ. ಬಿಜೆಪಿಯವರು ಚುನಾವಣೆಯಲ್ಲಿ ಸೋತಿದ್ದಾರೆ. ಎರಡು ಸದನದಲ್ಲಿ ವಿಪಕ್ಷ ನಾಯಕರ ಅಯ್ಕೆಯಾಗಿಲ್ಲ. ಅದಕ್ಕೆ ಈ ರೀತಿ ನಡೆದುಕೊಳ್ತಿದ್ದಾರೆ. ಹಿಂದೆಯೂ ಬೇರೆ ಬೇರೆ ಘಟನೆಗಳು ಆಗಿರಬಹುದು. ಕೃಷ್ಣ, ಬೋಪಯ್ಯ ಇದ್ದಾಗಲೂ ಗೊಂದಲವಿತ್ತು. ಶಾಸಕರು ಸದನದ ನಿಯಮಗಳಂತೆ ನಡೆದುಕೊಳ್ಳಬೇಕು" ಎಂದು ಹೇಳಿದರು.
ಇದನ್ನೂ ಓದಿ: ನಮ್ಮ ಅಮಾನತಿಗಿಂತಲೂ ಐಎಎಸ್ ಅಧಿಕಾರಿಗಳ ದುರ್ಬಳಕೆ ವಿರುದ್ಧ ಹೋರಾಟ: ಯಶಪಾಲ್ ಸುವರ್ಣ