ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಗೊಂದಲಕ್ಕೆ ತೆರೆ ಎಳೆಯಲು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಿದ್ದು, ಮೂರು ಹಂತದ ಸಭೆ ನಿಗದಿ ಮಾಡಿಕೊಂಡಿದ್ದಾರೆ. ಯಾರನ್ನೂ ಕಡೆಗಣಿಸದೇ ಎಲ್ಲರ ಅಭಿಪ್ರಾಯ ಆಲಿಸಿಯೇ ದೆಹಲಿಗೆ ವಾಪಸ್ ಆಗಲಿದ್ದಾರೆ.
ಸಂಜೆ 5 ಗಂಟೆಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಿಂದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಟ್ರಬಲ್ ಶೂಟ್ ಆರಂಭಿಸಲಿದ್ದಾರೆ. ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಸಭೆ ನಡೆಸಲಿದ್ದು, ಸಂಪುಟ ಸದಸ್ಯರಿಂದ ಪ್ರಸ್ತುತ ರಾಜ್ಯದಲ್ಲಿನ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಲಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ತಲೆದೂರಿರುವ ಗೊಂದಲ, ಸಮಸ್ಯೆ ಕುರಿತು ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಇಲಾಖೆಯಲ್ಲಿ ಸಚಿವರ ಸಾಧನೆಯೂ ಪ್ರಸ್ತಾಪವಾಗಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬಿಜೆಪಿ ಶಾಸಕರಿಗೆ ಖಡಕ್ ಸೂಚನೆ: ಬಣಗಳ ಶಕ್ತಿ ಪ್ರದರ್ಶನಕ್ಕೆ ಅರುಣ್ ಸಿಂಗ್ ಕಡಿವಾಣ
ನಾಳೆ ಇಡೀ ದಿನ ಶಾಸಕರಿಗಾಗಿಯೇ ಅರುಣ್ ಸಿಂಗ್ ಸಮಯ ಮೀಸಲಿರಿಸಿದ್ದಾರೆ. ಸಂಸದರು, ಶಾಸಕರು,ಪರಿಷತ್ ಸದಸ್ಯರು ಯಾರೇ ಆದರೂ ಮುಕ್ತವಾಗಿ ಬಂದು ಚರ್ಚೆ ನಡೆಸಲು ಅನುಮತಿ ನೀಡಲಾಗಿದೆ. ಆದರೆ, ಒಬ್ಬೊಬ್ಬರಾಗಿ ಪ್ರತ್ಯೇಕವಾಗಿ ಬಂದೇ ಮಾತುಕತೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ. ಸಿಎಂ ಪರ,ವಿರೋಧ ಬಣಗಳ ಶಾಸಕರು, ಪಕ್ಷನಿಷ್ಠ, ತಟಸ್ಥ ಶಾಸಕರ ಜೊತೆ ಅರುಣ್ ಸಿಂಗ್ ಮಾತುಕತೆ ನಡೆಸಲಿದ್ದಾರೆ.
ಅತೃಪ್ತರ ಆರೋಪಗಳೇನು?
ಆಡಳಿತದಲ್ಲಿ ಮುಖ್ಯಮಂತ್ರಿಗಳ ಕುಟುಂಬದ ಹಸ್ತಕ್ಷೇಪ ಹೆಚ್ಚಾಗಿದೆ, ಶಾಸಕರು ಸಚಿವರ ನಡುವೆ ಸಮನ್ವಯತೆ ಕೊರತೆ ಇದೆ, ಅನುದಾನ ಹಂಚಿಕೆ ಸರಿಯಾಗಿ ಆಗುತ್ತಿಲ್ಲ,ತಮ್ಮ ಸುತ್ತ ಇರುವ ಆಪ್ತರ ಮಾತುಗಳನ್ನಷ್ಟೇ ಸಿಎಂ ಹೆಚ್ಚು ಕೇಳುತ್ತಾರೆ, ಕಾಂಗ್ರೆಸ್ ಜೆಡಿಎಸ್ ನಾಯಕರ ಜೊತೆ ಸಿಎಂ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಹಾಗಾಗಿ ಮತ್ತೆ ಪಕ್ಷ ಅಧಿಕಾರಕ್ಕೆ ಬರಬೇಕು ಅಂದರೆ ನಾಯಕತ್ವ ಬದಲಿಸಬೇಕು ಎನ್ನುವ ಬೇಡಿಕೆಯನ್ನು ವಿರೋಧಿ ಬಣ ಅರುಣ್ ಸಿಂಗ್ ಮುಂದಿಡಲಿದೆ.
ಸಿಎಂ ಬಣದ ಶಾಸಕರ ವಾದಗಳೇನು?
ಸಿಎಂ ಬಣದಿಂದಲೂ ಯಡಿಯೂರಪ್ಪ ಪರ ವಕಾಲತ್ತು ವಹಿಸಲು ಸಿದ್ದತೆ ನಡೆದಿದೆ. ವಯಸ್ಸನ್ನು ಮೀರಿದ ಕೆಲಸವನ್ನು ಯಡಿಯೂರಪ್ಪ ಮಾಡುತ್ತಿದ್ದಾರೆ, ಅವರನ್ನು ಕೆಳಗಿಳಿಸಿದರೆ ರಾಜ್ಯದಲ್ಲಿ ಪಕ್ಷಕ್ಕೆ ಹೆಚ್ಚು ನಷ್ಟವಾಗಲಿದೆ. ಯಡಿಯೂರಪ್ಪ ಹಿಂದೆ ದೊಡ್ಡ ಸಮುದಾಯ ಇದೆ. ಹಾಗಾಗಿ ನಾಯಕತ್ವ ಬದಲಾವಣೆ ಅನ್ನುವುದಕ್ಕೆ ಬ್ರೇಕ್ ಹಾಕಬೇಕು, ಪಕ್ಷ ವಿರೋಧಿಗಳ ಬಾಯಿಗೆ ಲಗಾಮು ಹಾಕಬೇಕು, ಸಿಎಂ ವಿರುದ್ಧ ಹೇಳಿಕೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಬೇಡಿಕೆ ಮುಂದಿಡಲಿದ್ದಾರೆ.
ತಟಸ್ಥ ಬಣದ ಶಾಸಕರು ಪಕ್ಷದಲ್ಲಿನ ಆಂತರಿಕ ಕಲಹದಿಂದ ಪಕ್ಷದ ಬೆಳವಣಿಗೆಗೆ ದಕ್ಕೆಯಾಗುತ್ತಿದೆ, ವರ್ಚಸ್ಸು ಕುಗ್ಗುತ್ತಿದೆ, ಹೀಗಾಗಿ ಇಂತಹ ಚಟುವಟಿಕೆ, ಸಹಿ ಸಂಗ್ರಹ ಅಭಿಯಾನ, ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು ಎನ್ನುವ ಬೇಡಿಕೆ ಇರಿಸಲಿದ್ದಾರೆ.
ಅರುಣ್ ಸಿಂಗ್ರಿಂದ ಎಲ್ಲ ಶಾಸಕರ ಸಮಸ್ಯೆ ಆಲಿಕೆ
ನಾಳೆ ಅರುಣ್ ಸಿಂಗ್ ಒಬ್ಬರೇ ಕುಳಿತು ಶಾಸಕರ ಸಮಸ್ಯೆ ಆಲಿಸಲಿದ್ದಾರೆ, ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಕಟೀಲ್ ಇಲ್ಲದೇ ಇರುವ ಕಾರಣ ಶಾಸಕರು ಮುಕ್ತವಾಗಿ ಎಲ್ಲವನ್ನು ಹೇಳಬಹುದಾಗಿದೆ.
ಪರ - ವಿರೋಧಿ ಬಣದ ಶಾಸಕರು, ಸಚಿವರ ಅಭಿಪ್ರಾಯ ಸಂಗ್ರಹಿಸಿದ ನಂತರ ಶುಕ್ರವಾರ ಬೆಳಗ್ಗೆ ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ. ಪಕ್ಷ ಸಂಘಟನೆ, ಉಪ ಚುನಾವಣೆ, ಬಿಬಿಎಂಪಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳ ಸಿದ್ಧತೆ ಕುರಿತು ಚರ್ಚೆ ನಡೆಸಲಿದ್ದಾರೆ. ಸರ್ಕಾರ ಹಾಗೂ ಪಕ್ಷದ ನಡುವಿನ ಸಮನ್ವಯತೆ ಕುರಿತು ಚರ್ಚೆ ಆಗಲಿದೆ.
ಇದನ್ನೂ ಓದಿ: ಸಂಚಲನ ಮೂಡಿಸಿದ ಅರುಣ್ ಸಿಂಗ್ ರಾಜ್ಯ ಭೇಟಿ... ಸಚಿವ ಈಶ್ವರಪ್ಪ ಹೇಳಿದ್ದೇನು?
ಶುಕ್ರವಾರ ಸಂಜೆ 5 ಗಂಟೆಗೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಿರುವ ಅರುಣ್ ಸಿಂಗ್ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಿದ್ದಾರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಂಬಂಧ ಎಲ್ಲಾ ಬಣಗಳಿಗೂ ಒಪ್ಪಿಗೆಯಾಗುವಂತೆ ಕೆಲ ಸಲಹೆ ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ. ಕೋರ್ ಕಮಿಟಿ ಸಭೆ ನಂತರ ಮೂರು ದಿನ ನಡೆಸಿದ ಸಭೆಗಳು, ಸಂಗ್ರಹಿಸಿದ ಅಭಿಪ್ರಾಯ, ನೀಡಿದ ಸಲಹೆಗಳನ್ನು ಒಳಗೊಂಡಂತೆ ಸಮಗ್ರ ವರದಿಯನ್ನು ಹೈಕಮಾಂಡ್ಗೆ ಸಲ್ಲಿಕೆ ಮಾಡಲಾಗುತ್ತದೆ ಎನ್ನಲಾಗಿದೆ.