ಬೆಂಗಳೂರು: 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ರಾಜ್ಯ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಹಿರಿಯರು ಹಲವು ಬಾರಿ ಆಯ್ಕೆಯಾಗಿದ್ದವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಬಂಡಾಯದ ಬಿಸಿ ಹೆಚ್ಚಾಗಿದ್ದು, ರೆಬೆಲ್ಗಳ ಮನವೊಲಿಕೆಗೆ ರಾಜ್ಯ ನಾಯಕರು ಮುಂದಾಗಿದ್ದಾರೆ. ಈ ಸಂಬಂಧ ಪಕ್ಷದ ಕಚೇರಿಯಲ್ಲಿ ತುರ್ತು ಸಭೆ ನಡೆಸಿ ಬಂಡಾಯ ಶಮನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯ ನಾಯಕರು ಚರ್ಚೆ ನಡೆಸಿದ್ದಾರೆ.
ಹೈಕಮಾಂಡ್ನಿಂದ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ರಾಜ್ಯ ಬಿಜೆಪಿಗೆ ಬಂಡಾಯದ ಬೇಗುದಿಗೆಗೆ ಸಿಲುಕಿದೆ. ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೈಕಮಾಂಡ್ ನಿರ್ಧಾರಕ್ಕೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ ದೆಹಲಿಗೆ ತೆರಳಿದ್ದರೆ, ಮತ್ತೋರ್ವ ಹಿರಿಯ ನಾಯಕ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಚುನಾವನಾ ರಾಜಕೀಯ ನಿವೃತ್ತಿ ಘೋಷಿಸಿದ್ದು, ಅವರ ಬೆಂಬಲಿಗರಿಂದ ಶಿವಮೊಗ್ಗದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಮತ್ತೊಂದೆಡೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು ಪಕ್ಷ ತೊರೆಯಲು ಸಿದ್ದತೆ ನಡೆಸಿದ್ದಾರೆ. ಕಳೆದ ಬಾರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಮಾಜಿ ಸಚಿವ ಆರ್.ಶಂಕರ್ ಟಿಕೆಟ್ ಕೈತಪ್ಪಿದ್ದರಿಂದ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷಕ್ಕೂ ಗುಡ್ ಬೈ ಹೇಳುತ್ತಿದ್ದಾರೆ. ಇನ್ನೊಂದೆಡೆ ಹಾಲಿ ಸಚಿವ ಅಂಗಾರ ಟಿಕೆಟ್ ಕೈ ತಪ್ಪಿದ್ದರಿಂದಾಗಿ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಹಿರಿಯ ನಾಯಕ ಅಪ್ಪು ಪಟ್ಟಣಶೆಟ್ಟಿ ಕೂಡ ಅಸಮಾಧಾನ ಗೊಂಡಿದ್ದಾರೆ.
ಇನ್ನು ಬಿಜೆಪಿ ಸೋತಿದ್ದ ಕ್ಷೇತ್ರವಾದ ಬ್ಯಾಟರಾಯನಪುರದಲ್ಲಿ ತಮ್ಮೇಶ್ ಗೌಡಗೆ ಟಿಕೆಟ್ ನೀಡಿದ್ದನ್ನು ಖಂಡಿಸಿ ಮುನೀಂದ್ರ ಕುಮಾರ್ ಬಂಡಾಯ ಎದ್ದಿದ್ದರೆ, ಚಾಮರಾಜಪೇಟೆಯಲ್ಲಿ ಭಾಸ್ಕರ್ ರಾವ್ಗೆ ಟಿಕೆಟ್ ನೀಡಿದ್ದನ್ನು ಕಾರ್ಯಕರ್ತರು ಖಂಡಿಸಿದ್ದು, ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋವಿಂದರಾಜನಗರ ಕ್ಷೇತ್ರದಲ್ಲಿ ಸೋಮಣ್ಣ ಪುತ್ರನಿಗೆ ಟಿಕೆಟ್ ಕೊಡುವಂತೆ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಈ ಎಲ್ಲ ಕ್ಷೇತ್ರಗಳಲ್ಲಿಯೂ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟುತ್ತಿದೆ.
ಬಂಡಾಯದಿಂದಾಗಿ ಅಭ್ಯರ್ಥಿಗಳ ಗೆಲುವಿಗೆ ಅಡ್ಡಿ: ಚುನಾವಣೆ ಸಮೀಪದಲ್ಲಿ ಕೆಲ ಶಾಸಕರು, ಪರಿಷತ್ ಸದಸ್ಯರು ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರೆ ಇದೀಗ ಟಿಕೆಟ್ ವಂಚಿತರು ಕಾಂಗ್ರೆಸ್ನತ್ತ ಮುಖ ಮಾಡುತ್ತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಬಂಡಾಯದಿಂದಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಅಡ್ಡಿಯಾಗುವ ಆತಂಕ ಇದೀಗ ರಾಜ್ಯ ಬಿಜೆಪಿ ನಾಯಕರನ್ನು ಕಾಡುತ್ತಿದೆ. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ರಾಜ್ಯ ನಾಯಕರು ಇಂದು ತುರ್ತು ಸಭೆ ನಡೆಸಿ ಬಂಡಾಯ ಶಮನಕ್ಕೆ ಕೈಗೊಳ್ಳಬೇಕಾದ ಕ್ರಮಗಳು, ಮನವೊಲಿಕೆ ಕಾರ್ಯದ ಕುರಿತು ಸಮಾಲೋಚನೆ ನಡೆಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ಅಭ್ಯರ್ಥಿಗಳ ಟಿಕೆಟ್ ಘೋಷಣೆಯಿಂದ ಉಂಟಾಗಿರುವ ಬಂಡಾಯ ಶಮನ ಮಾಡುವ ಸಂಬಂಧ ನಡೆದ ಮಹತ್ವದ ಸಭೆಯಲ್ಲಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ರಾಜ್ಯ ಚುನಾವಣಾ ನಿರ್ವಹಣಾ ಸಂಚಾಲಕಿ ಶೋಭಾ ಕರಂದ್ಲಾಜೆ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಭಗವಂತ ಕೂಬಾ ಉಪಸ್ಥಿತರಿದ್ದು, ಕೆಲ ಕಾಲ ಮಾತುಕತೆ ನಡೆಸಿದರು.
ಟಿಕೆಟ್ ಸಿಗದೇ ಬಂಡಾಯ ಎಂದಿರುವ ನಡೆ ಹಾಗೂ ಕೆಲವು ಕಡೆ ಅವರನ್ನು ಸಮಾಧಾನ ಪಡಿಸಿ ಅಭ್ಯರ್ಥಿಗಳ ಪರ ಕೆಲಸ ಮಾಡಿಸುವುದು, ಚುನಾವಣೆಯಲ್ಲಿ ಗೆಲ್ಲುವ ತಂತ್ರ ಹಾಗೂ ಪ್ರಚಾರ ಕಾರ್ಯಗಳ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು. ರಾಜ್ಯ ನಾಯಕರ ಮನವೊಲಿಕೆ ಕಾರ್ಯ ವಿಫಲವಾಗಿ ಪರಿಸ್ಥಿತಿ ಕೈಮೀರಿರುವ ಕಡೆ ಹೈಕಮಾಂಡ್ನಿಂದ ಮಾತುಕತೆ ನಡೆಸಬೇಕು. ಅಂತಿಮವಾಗಿ ಹೊರಹೋಗಲು ನಿರ್ಧಾರ ಮಾಡಿದ್ದೇ ಆದಲ್ಲಿ ಆ ಕ್ಷೇತ್ರಗಳಲ್ಲಿ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಬೇಕಾದ ಕಾರ್ಯತಂತ್ರ ರೂಪಿಸಿಕೊಳ್ಳಬೇಕು ಎಂದು ನಿರ್ಧರಿಸಲಾಯಿತು.
ಇದನ್ನೂ ಓದಿ: ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿ ದರ್ಶನ ಪಡೆದ ಸಿಎಂ ಬೊಮ್ಮಾಯಿ