ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪೂರ್ಣ ಪ್ರಮಾಣದಲ್ಲಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪಕ್ಷದ ಮಹತ್ವದ ಸಭೆಯಲ್ಲಿ ಭಾಗಿಯಾದರು.
ನವದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ಮೋರ್ಚಾಗಳ ಅಧ್ಯಕ್ಷರ ಸಭೆ ನಡೆಸಿದರು. ನೂತನವಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ಅಧಿಕಾರ ಸ್ವೀಕಾರ ಮಾಡಿರುವ ಸಿ.ಟಿ ರವಿ ಕೂಡ ಈ ಸಭೆಯಲ್ಲಿ ಭಾಗವಹಿಸಿದರು.
ಪಕ್ಷ ಸಂಘಟನೆ, ಉಪ ಚುನಾವಣೆಗಳು, ಚುನಾವಣೆಗಳು ನಡೆಯಲಿರುವ ರಾಜ್ಯಗಳಲ್ಲಿ ಪಕ್ಷ ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಸಲಾಯಿತು. ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮತ್ತಷ್ಟು ಚುರುಕುಗೊಳಿಸಬೇಕು. ಪಕ್ಷಕ್ಕೆ ಬೇಸ್ ಇಲ್ಲದ ಕಡೆ ಹೆಚ್ಚಿನ ಗಮನ ಕೇಂದ್ರೀಕರಣ ಮಾಡಬೇಕು. ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಪಕ್ಷಕ್ಕೆ ಶಕ್ತಿ ತುಂಬುವ ಕುರಿತು ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆಸಲಾಯಿತು ಎನ್ನಲಾಗಿದೆ.