ಬೆಂಗಳೂರು/ಚಿಕ್ಕಮಗಳೂರು : ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕನ ಆಯ್ಕೆ ಕಸರತ್ತು ಇದೀಗ ಅಂತಿಮ ಹಂತಕ್ಕೆ ಬಂದು ತಲುಪಿದೆ. ನಾಳೆ ಬಿಜೆಪಿ ಹೈಕಮಾಂಡ್ ರಾಜ್ಯ ಪ್ರತಿಪಕ್ಷ ನಾಯಕ ಹೆಸರನ್ನು ಘೋಷಣೆ ಮಾಡಲಿದೆ. ಬಿಜೆಪಿಯಿಂದ ವಿಪಕ್ಷ ನಾಯಕ ಯಾರಾಗ್ತಾರೆ ಎಂಬ ಕುತೂಹಲಕ್ಕೆ ನಾಳೆ ತೆರೆ ಬೀಳುವ ಎಲ್ಲಾ ಸಾಧ್ಯತೆ ಇದೆ. ತಿಂಗಳಾದರೂ ಬಿಜೆಪಿ ಹೈ ಕಮಾಂಡ್ ವಿಪಕ್ಷ ನಾಯಕ ಹೆಸರು ಘೋಷಣೆ ಮಾಡಲು ಸಾಧ್ಯವಾಗಿಲ್ಲ. ಸೋಮವಾರದಿಂದ ಅಧಿವೇಶನ ಆರಂಭವಾಗುವ ಹಿನ್ನೆಲೆ ವಿಪಕ್ಷ ನಾಯಕನ ಆಯ್ಕೆ ಅನಿವಾರ್ಯವಾಗಿದೆ. ಹೀಗಾಗಿ ನಾಳೆಗೆ ಬಿಜೆಪಿ ವಿಪಕ್ಷ ನಾಯಕನ ಹೆಸರನ್ನು ಘೋಷಣೆ ಮಾಡಲಿದೆ.
ನಾಳೆ ಸಂಜೆ ವೇಳೆಗೆ ವಿಪಕ್ಷ ನಾಯಕನ ಘೋಷಣೆ : ರಾಜ್ಯ ವಿಧಾನಸಭೆ ವಿಪಕ್ಷ ನಾಯಕ ಆಯ್ಕೆಯು ನಾಳೆ (ಭಾನುವಾರ) ನಡೆಯಲಿದ್ದು, ಸಂಜೆ ವೇಳೆಗೆ ಗೊತ್ತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷನಾಯಕ ಯಾರೆಂದು ನಾಳೆ ಸಂಜೆ ವೇಳೆಗೆ ಗೊತ್ತಾಗಲಿದೆ ಎಂದು ಹೇಳಿದರು.
ಬಜೆಟ್ ಅಧಿವೇಶನ ಕುರಿತು ಮಾತನಾಡಿದ ಅವರು, ಚರ್ಚಿಸಲು ಬೇಕಾದಷ್ಟು ವಿಷಯ ಇದೆ. ಗ್ಯಾರಂಟಿ ಗೊಂದಲಗಳ ಬಗ್ಗೆ ಬಜೆಟ್ ವೇಳೆ ಎಲ್ಲಾ ಚರ್ಚೆ ಆಗುತ್ತದೆ. ಕಾಂಗ್ರೆಸ್ನವರು ಗ್ಯಾರಂಟಿಗಳನ್ನು ಗೊಂದಲದ ಗೂಡು ಮಾಡಿದ್ದಾರೆ ಎಂದು ಹೇಳಿದರು. ಬಿಜೆಪಿ ನೋಟಿಸ್ಗೆ ಕ್ಯಾರೇ ಅನ್ನದ ನಾಯಕರ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಎಲ್ಲವನ್ನೂ ರಾಜ್ಯಾಧ್ಯಕ್ಷರು ನೋಡಿಕೊಳ್ಳುತ್ತಾರೆ ಎಂದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೊದಲು 200 ಯೂನಿಟ್ ಅಂದ್ರು, ಬಳಿಕ ವರ್ಷದ ಸರಾಸರಿ ಅಂದ್ರು. ಮುಂದೆ ಏನು ಮಾಡುತ್ತಾರೆ ಎಂದು ನೋಡೋಣ. ಗೊಂದಲ ಸೃಷ್ಟಿ ಮಾಡಿ, ವಿದ್ಯುತ್ ಶುಲ್ಕ ಹೆಚ್ಚು ಮಾಡಿದ್ದಾರೆ. ಜನರಿಗೆ ವಿದ್ಯುತ್ ಶಾಕ್ ನೀಡಿದ್ದಾರೆ ಎಂದರು.
ಅಭಿಪ್ರಾಯ ಸಂಗ್ರಹ : ಈಗಾಗಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಪ್ರಧಾನ್ ಕಳೆದ ಕೆಲ ದಿನಗಳಿಂದ ವಿಪಕ್ಷ ನಾಯಕನ ಸಂಬಂಧ ಪಕ್ಷದ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಸಂಗ್ರಹಿಸಿರುವ ಅಭಿಪ್ರಾಯವನ್ನು ಬಿಜೆಪಿ ವರಿಷ್ಠರಿಗೆ ಸಲ್ಲಿಸಲಾಗಿದೆ.
ವಿಪಕ್ಷ ನಾಯಕ ಸ್ಥಾನಕ್ಕೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಬಸನಗೌಡ ಯತ್ನಾಳ್, ಆರ್.ಅಶೋಕ್, ಅಶ್ವತ್ಥ್ ನಾರಾಯಣ್, ಸುನೀಲ್ ಕುಮಾರ್, ಸುರೇಶ್ ಕುಮಾರ್ ರೇಸ್ ನಲ್ಲಿದ್ದಾರೆ. ಭಾನುವಾರ ವಿಪಕ್ಷ ನಾಯಕನ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿ ಕುಮಾರ್ ತಿಳಿಸಿದ್ದಾರೆ.
ಭಾನುವಾರ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಧರ್ಮೇಂದ್ರ ಪ್ರಧಾನ್ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಮ್ಮುಖದಲ್ಲಿ ನಡೆಯಲಿರುವ ಸಭೆಯಲ್ಲಿ ಹೆಸರು ಘೋಷಿಸುವುದಾಗಿ ಹೇಳಲಾಗಿದೆ. ಆದರೆ, ನಾಳೆಗೆ ಈವರೆಗೆ ಯಾವುದೇ ಸಭೆ ನಿಗದಿಯಾಗಿಲ್ಲ. ಹೈ ಕಮಾಂಡ್ ನಿಂದ ಸೂಚನೆ ಬಂದಿಲ್ಲ ಎಂದು ಎನ್.ರವಿಕುಮಾರ್ ತಿಳಿಸಿದ್ದಾರೆ.
ವಿಪಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ : ವಿಪಕ್ಷ ನಾಯಕ ಸ್ಥಾನಕ್ಕೆ ಬಿಜೆಪಿಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದೇ ಪೈಪೋಟಿಯಿಂದ ವಿಪಕ್ಷ ನಾಯಕನ ಆಯ್ಕೆ ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿದೆ. ಮಾಜಿ ಸಿಎಂ ಬೊಮ್ಮಾಯಿ ಹಾಗೂ ಬಸನಗೌಡ ಯತ್ನಾಳ್ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ. ಉಳಿದಂತೆ ಒಕ್ಕಲಿಗ ನಾಯಕರಾದ ಅಶ್ವತ್ಥ್ ನಾರಾಯಣ್ ಮತ್ತು ಆರ್.ಅಶೋಕ್, ಸುನಿಲ್ ಕುಮಾರ್, ಸುರೇಶ್ ಕುಮಾರ್ ಹೆಸರುಗಳು ಕೇಳಿ ಬರುತ್ತಿವೆ. ಹೊಂದಾಣಿಕೆ ರಾಜಕಾರಣ ಆರೋಪ ಗಮನದಲ್ಲಿಟ್ಟುಕೊಂಡು ಲಿಂಗಾಯತ-ಒಕ್ಕಲಿಗ ಸಮುದಾಯದ ಲೆಕ್ಕಾಚಾರದೊಂದಿಗೆ ಹೈ ಕಮಾಂಡ್ ವಿಪಕ್ಷ ನಾಯಕನ ಆಯ್ಕೆ ಕಸರತ್ತು ನಡೆಸುತ್ತಿದೆ.
ಇದನ್ನೂ ಓದಿ : ಕಾಂಗ್ರೆಸ್ನ ಘೋಷಿತ ಎಲ್ಲಾ ಯೋಜನೆಗಳು ಜಾರಿಗೆ ಬರಲಿದೆ: ಡಿಸಿಎಂ ಡಿಕೆಶಿ