ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಿತು. ಬೆಂಗಳೂರಲ್ಲಿನ ಮೈಸೂರು ವೃತ್ತದ ಬಳಿಯೂ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸಿತು.
ಪಾಕ್ ವಿದೇಶಾಂಗ ಸಚಿವನ ಹೇಳಿಕೆಯನ್ನು ಖಂಡಿಸಿದ ಬಿಜೆಪಿ ನಾಯಕರು, ಬಿಲಾವಲ್ ವಿರುದ್ಧ ಧಿಕ್ಕಾರ ಕೂಗಿದರು. ಪಾಕಿಸ್ತಾನ ಹಾಗೂ ಬಿಲಾವಲ್ ವಿರುದ್ಧ ಧಿಕ್ಕಾರ ಕೂಗಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು. ಭಯೋತ್ಪಾದಕರ ತವರು ಕೇಂದ್ರವಾದ ಪಾಕಿಸ್ತಾನ, ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದು ಅವರ ನೀಚ ಮನಸ್ಥಿತಿ ತೋರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ಮಾತನಾಡಿದ ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಡಾ. ಸಂದೀಪ್ ಕುಮಾರ್, ಪಾಕಿಸ್ತಾನ ಭಯೋತ್ಪಾದಕರ ತಾಣವಾಗಿದೆ. ಜಗತ್ತಿಗೇ ಮಾರ್ಗದರ್ಶನ ಮಾಡುತ್ತಿರುವ ಮೋದಿ ಅವರ ಬಗ್ಗೆ ಅಂತಹ ದೇಶದ ಸಚಿವರು ಮಾತನಾಡಿ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ ಎಂದು ಟೀಕಿಸಿದರು.
ನಮ್ಮ ಸೈನಿಕರು ಚೀನಾ ಹಿಮ್ಮೆಟ್ಟಿಸುತ್ತಿದ್ದಾರೆ. ಇನ್ನೊಂದೆಡೆ ರಾಹುಲ್ ಗಾಂಧಿ ಅವರು ನಮ್ಮ ಸೈನಿಕರ ಶೌರ್ಯ ಪ್ರಶ್ನಿಸುವ ಮತ್ತು ಅಣಕಿಸುವ ಮಾದರಿಯಲ್ಲಿ ವ್ಯಂಗ್ಯವಾಡಿದ್ದಾರೆ. ಇದು ಖಂಡನೀಯ ಎಂದು ತಿಳಿಸಿದರು.
ಇದೇ ವೇಳೆ ಕುಕ್ಕರ್ ಬ್ಲಾಸ್ಟ್ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೀಡಿದ ಹೇಳಿಕೆಯನ್ನೂ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಹೇಳಿಕೆ ಸಂಬಂಧ ಡಿಕೆಶಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಅಲ್ಪಸಂಖ್ಯಾತರ ಮತ ಓಲೈಕೆಗಾಗಿ ಡಿಕೆಶಿ ಆ ಹೇಳಿಕೆ ಖಂಡನೀಯ ಎಂದು ಕಿಡಿಕಾರಿದರು.
ಪ್ರತಿಭಟನೆ ಬಳಿಕ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟೋ ಹೇಳಿಕೆ ವಿರುದ್ಧ ಖಂಡನಾ ನಿರ್ಣಯವನ್ನು ರಾಜ್ಯಪಾಲರಿಗೆ ನೀಡಲಾಯಿತು. ಪ್ರತಿಭಟನೆಯಲ್ಲಿ ಬೆಂಗಳೂರಿನ ಮೂರು ಜಿಲ್ಲೆಯಲ್ಲಿರುವ ರಾಜ್ಯ, ಜಿಲ್ಲಾ, ಮಂಡಲಗಳ ಯುವ ಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ದಾವಣಗೆರೆ, ವಿಜಯಪುರ, ಬೀದರ್, ಕೊಪ್ಪಳ ಮತ್ತು ಚಿಕ್ಕೋಡಿ ಸೇರಿದಂತೆ ರಾಜ್ಯದ ಹಲವೆಡೆ ಪಾಕ್ ವಿದೇಶಾಂಗ ಸಚಿವನ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿತು.
(ಓದಿ: ಮೋದಿ ಬಗ್ಗೆ ವಿವಾದಿತ ಹೇಳಿಕೆ ಕೊಟ್ಟ ಬಿಲಾವಲ್ ಭುಟ್ಟೋ ಜನ್ಮ ಜಾಲಾಡಿದ ಭಾರತ)