ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಬಿಜೆಪಿ ಕೋಟ್ಯಾಂತರ ಹಣ ಹಂಚಿಕೆ ಮಾಡಿ ಶಾಸಕ, ಸಚಿವರನ್ನು ಖರೀದಿಸುವಾಗ ಐಟಿ, ಇಡಿ ಅಧಿಕಾರಿಗಳು ಸತ್ತು ಹೋಗಿದ್ದರಾ? ಬಿಜೆಪಿ ವಿರುದ್ಧ ಮಾತನಾಡಿದವರನ್ನು ಈ ರೀತಿ ಬಗ್ಗು ಬಡಿಯಲಾಗುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಬಿಜೆಪಿಯವರಿಗೆ ನಾಚಿಕೆ ಮಾನ ಮರ್ಯಾದೆ ಇದೆಯಾ. ನವ ಭಾರತ ನಿರ್ಮಾಣ ಬೇರೆ ಮಾಡ್ತಾರಂತೆ, ಸ್ವತಃ ಬಿಎಸ್ವೈ ಶಾಸಕರಿಗೆ ಹಣ ನೀಡಿರುವುದಾಗಿ ಈ ಹಿಂದೆ ಒಪ್ಪಿಕೊಂಡಿದ್ದಾರೆ. ಅವರನ್ನು ಐಟಿ, ಇಡಿ ಇಲಾಖೆ ಏನು ಮಾಡಿವೆ ಎಂದು ಪ್ರಶ್ನಿಸಿದರು.
ನವ ನಿರ್ಮಾಣ ಬೇರೆ ಮಾಡ್ತಿವಿ ಅಂತಿದ್ದಾರೆ ಬಿಜೆಪಿಯವರು. 2008ರಿಂದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಏನೇನು ಮಾಡಿದ್ದಾರೆ ಎಂದು ಗೊತ್ತಿದೆ. ದ್ವೇಷದ ರಾಜಕಾರಣ ಮಾಡಲ್ಲ ಎಂದು ದೊಡ್ಡದಾಗಿ ಜಾಹಿರಾತು ನೀಡುತ್ತಾರೆ ಎಂದು ಹೆ.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಇಲ್ಲಿನ ಜೆಪಿ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಲೂ ಸಹ 15-20ಜನ ಎಂಎಲ್ಎಗಳನ್ನು ವ್ಯಾಪಾರ ಮಾಡ್ತಿದ್ದಾರೆ. ಕೆಲವು ಬೋರ್ಡ್ ಮುಖ್ಯಸ್ಥರನ್ನಾಗಿ ಮಾಡ್ತೀವಿ ಎಂದು ಆಮಿಷ ತೋರಿಸುತ್ತಿದ್ದಾರೆ ಎಂದು ಬಿಎಸ್ವೈ ವಿರುದ್ಧ ಹರಿಹಾಯ್ದಿದ್ದಾರೆ.