ಬೆಂಗಳೂರು: ಆರ್ಥಿಕ ಸಂಕಷ್ಟ ಸರಿದೂಗಿಸಲು ಘೋಷಿಸಿದ ಆತ್ಮ ನಿರ್ಭರ ಭಾರತ ಪ್ಯಾಕೇಜ್ನಿಂದ 75 ಸಾವಿರ ಜನರಿಗೆ ಲಾಭ ಸಿಕ್ಕಿದೆ ಎಂದು ಕೇಂದ್ರ ಸರ್ಕಾರವೇ ಮಾಹಿತಿ ನೀಡಿದೆ. ಈಗ 1 ಲಕ್ಷ ಕೋಟಿ ಯೋಜನೆಗೆ ಚಾಲನೆ ನೀಡಿದ್ದಾರೆ. ಇದು ಯಾವಾಗ, ಎಷ್ಟು ಫಲಾನುಭವಿಗಳಿಗೆ ತಲುಪುತ್ತದೆ? ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಐತಿಹಾಸಿಕ 'ಕ್ವಿಟ್ ಇಂಡಿಯಾ ಚಳುವಳಿ'ಗೆ ನಾಂದಿ ಹಾಡಿದ ದಿನವನ್ನು ಮಹಾತ್ಮ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕೊರೊನಾ ಸಮಸ್ಯೆ ಇಡೀ ದೇಶವನ್ನು ಆವರಿಸಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ಕೊರೊನಾ ಹೆಸರನ್ನು ಮುಂದಿಟ್ಟುಕೊಂಡು ಜನಸಾಮಾನ್ಯರಿಗೆ ಸಲ್ಲಬೇಕಾದ ಎಲ್ಲಾ ಸೇವೆಗಳನ್ನೂ ನಿಲ್ಲಿಸಿವೆ. ನಾವು ಇದರ ವಿರುದ್ಧವೂ ದನಿ ಎತ್ತುತ್ತೇವೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಸರ್ಕಾರ ತಕ್ಷಣ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಸಚಿವರು ಪ್ರವಾಹ ಸ್ಥಳಗಳಿಗೆ ಭೇಟಿ ನೀಡಿ, ನಿರಾಶ್ರಿತರ ನೋವು, ಸಮಸ್ಯೆಗಳಿಗೆ ಸ್ಪಂದಿಸಬೇಕು. ರಾಜ್ಯದ ಮಲೆನಾಡು ಭಾಗದಲ್ಲಿ ಈ ಬಾರಿಯೂ ಹೆಚ್ಚು ಹಾನಿಯಾಗಿದೆ ಎಂದು ಹೇಳಿದರು.
ಇತಿಹಾಸ ತಿರುಚುವ ಕೆಲಸ:
ಆರ್ಥಿಕ ಸಂಕಷ್ಟ ಹಾಗೂ ಕೊರೊನಾ ಸೋಂಕಿನ ನಡುವೆ ರಾಜ್ಯ ಸರ್ಕಾರ ಇತಿಹಾಸ ತಿರುಚುವ ಪ್ರಯತ್ನ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ನಾಯಕರು ಪ್ರಾಣತ್ಯಾಗ ಮಾಡಿದ್ದಾರೆ. ಬಿಜೆಪಿ ಯಾವ ಹೋರಾಟದಲ್ಲೂ ಭಾಗವಹಿಸಿಲ್ಲ. ಇವರು ನಕಲಿ ರಾಷ್ಟ್ರೀಯವಾದಿಗಳು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಾಗು ಮತ್ತಿತರು ಇದ್ದರು.