ಬೆಂಗಳೂರು : ಕೋವಿಡ್ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದ್ದು, ಅತಿ ಹೆಚ್ಚು ಹಗರಣಗಳಾಗಿವೆ. ಹಾಗಾಗಿ, ಪ್ರತಿಷ್ಠಿತ ಸ್ವಾಯತ್ತ ತನಿಖಾ ಸಂಸ್ಥೆಯಿಂದ ಸಮಗ್ರ ತನಿಖೆ ನಡೆಸಬೇಕು ಎಂದು ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ವಿಶೇಷ ವರದಿಯಲ್ಲಿ ಶಿಫಾರಸು ಮಾಡಿದೆ.
ಜೊತೆಗೆ ಸಮಿತಿ ವಿಚಾರಣೆ ವೇಳೆ ಸೂಕ್ತ ಮಾಹಿತಿಯನ್ನು ಸಲ್ಲಿಸದ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ನಿರ್ಣಯಿಸಿದೆ.
ಇಂದು ವಿಧಾನಸಭೆಗೆ ಸಲ್ಲಿಸಿರುವ ಶಿಫಾರಸ್ಸಿನಲ್ಲಿ ಶಾಸಕಾಂಗ ಸಮಿತಿಗೆ ಮಾಹಿತಿ ನಿರಾಕರಿಸಿದ, ಸುಳ್ಳು ಮಾಹಿತಿ ನೀಡಿದ ಮತ್ತು ಅವ್ಯವಹಾರ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿದೆ. ಶೀಘ್ರದಲ್ಲೇ ತನಿಖೆ ಆದೇಶ ಹೊರಬೀಳುವ ನಿರೀಕ್ಷೆ ಇದ್ದು, ಯಾವ ಸ್ವಾಯತ್ತ ಸಂಸ್ಥೆಯಿಂದ ವಿಚಾರಣೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
2019-20 ಹಾಗೂ 2020- 21ನೇ ಸಾಲಿನ ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕೋರಿದ್ದ ಕೋವಿಡ್ ಮಾಹಿತಿಗಳನ್ನು ಇಲಾಖೆ ಸಮರ್ಪಕವಾಗಿ ಒದಗಿಸಲಿಲ್ಲ. ಹೀಗಾಗಿ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಗಳ ಅನ್ವಯ ಪ್ರದತ್ತ ಅಧಿಕಾರವನ್ನು ಬಳಸಿಕೊಂಡು ಸಮಿತಿ ವಿಶೇಷ ವರದಿಯನ್ನು ಸಿದ್ಧಪಡಿಸಿ ಎರಡೂ ಸದನಗಳಿಗೆ ಸಲ್ಲಿಸಿದೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ವಿಶೇಷ ವರದಿಗಳು ಸಲ್ಲಿಕೆಯಾಗಿದ್ದು ಅಪರೂಪ. ಹೀಗಾಗಿಯೇ ವಿಷಯ ಗಮನ ಸೆಳೆದಿದ್ದು, ಗಂಭೀರ ತಾರ್ಕಿಕ ಅಂತ್ಯ ಕಾಣಲಿದೆ ಎನ್ನುವ ಮಾತುಗಳು ವಿಧಾನಸಭೆಯ ಕಾರಿಡಾರ್ನಲ್ಲಿ ಹರಿದಾಡುತ್ತಿವೆ.
2019- 20 ರಲ್ಲಿ ಎಚ್ ಕೆ ಪಾಟೀಲ್ ಹಾಗೂ 2020- 21ರಲ್ಲಿ ರಾಮಲಿಂಗಾರೆಡ್ಡಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿದ್ದರು. 2021ರ ಜನವರಿಯಿಂದ ಜುಲೈ ತಿಂಗಳವರೆಗೆ ರಾಜ್ಯದಲ್ಲಿ ಕೋವಿಡ್ ನಿಂದಾಗಿ 4,26,943 ಜನ ಬಲಿಯಾಗಿದ್ದಾರೆ. 2020ರಲ್ಲಿ 2,69,029 ಮಂದಿ ಮೃತಪಟ್ಟಿದ್ದಾರೆ. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು 37,206 ಮಂದಿ ಮಾತ್ರ ಕೋವಿಡ್‍ನಿಂದ ಸಾವು ಸಂಭವಿಸಿವೆ ಎಂಬ ತಪ್ಪು ಮಾಹಿತಿ ನೀಡಿದ್ದಾರೆ. ಜೀವಗಳ ಬೆಲೆ ಅರ್ಥ ಮಾಡಿಕೊಳ್ಳದೇ ಮರಣ ಪ್ರಮಾಣ ಕಡಿಮೆ ತೋರಿಸಿ ಘೋರ ಅಪರಾಧವನ್ನು ಎಸಗಿದ್ದಾರೆ ಎಂಬುದಾಗಿ ಸಮಿತಿ ಅಭಿಪ್ರಾಯಪಟ್ಟಿದೆ. ಈ ಅಂಶ ಕೂಡ ಕಳೆದೆರಡು ವರ್ಷಗಳ ಕಲಾಪಗಳಲ್ಲಿ ಬಹುಮುಖ್ಯ ಚರ್ಚೆಯಾಗಿತ್ತು.
ಹಿಂದಿನ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ. ಕೆ ಸುಧಾಕರ್ ವಿರುದ್ಧ ಆಗಿನ ವಿಪಕ್ಷವಾಗಿದ್ದ ಕಾಂಗ್ರೆಸ್, ಕೋವಿಡ್ ನಿರ್ವಹಣೆಯಲ್ಲಿ ಭಾರೀ ಲೋಪಗಳಾಗಿವೆ ಎಂದು ಹಲವು ಬಾರಿ ವಿಧಾನಸಭೆಯಲ್ಲಿ ಆರೋಪಿಸಿತ್ತು. ಕೋವಿಡ್ ಸಂದರ್ಭದಲ್ಲಿ ಅಪಾರ ಅವ್ಯವಹಾರ ಆಗಿದೆ ಎಂದು ಕಾಂಗ್ರೆಸ್ ಸದನದ ಹೊರಗೂ ಸಹ ಆರೋಪ ಮಾಡುತ್ತಲೇ ಬಂದಿತ್ತು. ಈಗ ಶಾಸಕಾಂಗದ ಅಧಿಕೃತ ವರದಿ ಕೈ ಸೇರಿರುವುದರಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ಬಿಜೆಪಿ ವಿರುದ್ಧ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ.
ಪ್ರಮುಖ ಲೋಪಗಳೇನು? : ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳನ್ನು ಮೀರಿ ಮಾತ್ರೆಗಳನ್ನು ಖರೀದಿಸಲಾಯಿತು. 1.10 ಕೋಟಿಗೂ ಅಧಿಕ ಮಾತ್ರೆಗಳನ್ನು ಖರೀದಿಸಿದ ನಂತರ ಅವುಗಳನ್ನು ಉಗ್ರಾಣಗಳಲ್ಲಿ ಸಂಗ್ರಹ ಮಾಡಿಟ್ಟುಕೊಳ್ಳಲಾಯಿತೇ ವಿನಾಃ ಸರಬರಾಜುದಾರರಿಗೆ ಹಿಂದಿರುಗಿಸಲು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಒಂದು ವೇಳೆ ಈ ಮಾತ್ರೆಗಳನ್ನು ಅಮಾಯಕ ರೋಗಿಗಳಿಗೆ ನೀಡಿದ್ದರೆ ಆಗುತ್ತಿದ್ದ ಗಂಭೀರ ಪರಿಣಾಮಗಳ ಬಗ್ಗೆ ಆಲೋಚಿಸಲಿಲ್ಲ. ಈ ಆತ್ಮಘಾತಕ ಲೋಪಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
ಪಿಎಂ ಕೇರ್ಸ್ ನಿಧಿಯಿಂದ 165 ವೆಂಟಿಲೇಟರ್ಗಳನ್ನು ಖರೀದಿಸಿ ಅದನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಲಾಯಿತು. ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ನೀಡದೇ ಇದನ್ನು ಖಾಸಗಿಯವರಿಗೆ ಕೊಟ್ಟಿದ್ದು ಸಮರ್ಥನೀಯವಲ್ಲ. ಏಕೆಂದರೆ ಸರ್ಕಾರ ಕೊಟ್ಟ ವೆಂಟಿಲೇಟರ್ ಬಳಸಿದ ಖಾಸಗಿಯವರು ಸುಲಿಗೆಯನ್ನೇನೂ ನಿಲ್ಲಿಸಲಿಲ್ಲ. ಅಲ್ಲದೇ, ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಕೊರತೆ ಇಲ್ಲವೆಂದು ಅಧಿಕಾರಿಗಳು ಸಮಿತಿಗೆ ತಪ್ಪು ಮಾಹಿತಿಯನ್ನು ನೀಡಿದ್ದಾರೆ.
ರೆಮ್‍ಡಿಸಿವಿಯರ್ ಇಂಜೆಕ್ಷನ್‍ಗಳು ಮುಕ್ತ ಮಾರುಕಟ್ಟೆಯಲ್ಲಿ ಹಾಗೂ ಕಾಳ ಸಂತೆಯಲ್ಲಿ ಮಾರಾಟವಾಗುವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಕ್ರಮ ತೆಗೆದುಕೊಳ್ಳಲಿಲ್ಲ. ಔಷಧ ಖರೀದಿ ಮತ್ತು ಇನ್ನಿತರ ಉಪಕರಣಗಳ ಖರೀದಿ ವಿಷಯದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಆಗಿದೆ. ಬೆಡ್ ಹಂಚಿಕೆಯಲ್ಲಿ ಅಕ್ರಮವಾಗಿದೆ. ಅಕ್ರಮ ಬೆಡ್ ಹಂಚಿಕೆ ತನಿಖೆ ನಡೆಸುತ್ತಿರುವ ಸಿಸಿಬಿ ತನಿಖೆಯಲ್ಲಿ ಪ್ರಗತಿಯಾಗಿಲ್ಲ. ಸಾವಿನ ಸಂಖ್ಯೆಯ ಲೆಕ್ಕವನ್ನು ತಪ್ಪಾಗಿ ಕೊಡಲಾಗಿದೆ ಎಂದು ಶಿಫಾರಸ್ಸಿನ ವರದಿಯಲ್ಲಿ ತಿಳಿಸಲಾಗಿದೆ ಸರ್ಕಾರ ಹೇಳಿದೆ.
ಇದನ್ನೂ ಓದಿ : ಸದನಕ್ಕೆ ಸಕಾಲಕ್ಕೆ ಸಚಿವರು ಆಗಮಿಸಬೇಕು.. ಸಭಾಧ್ಯಕ್ಷ ಯು ಟಿ ಖಾದರ್ ಸೂಚನೆ