ಬೆಂಗಳೂರು: ಚುನಾವಣೆ ನಂತರ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪತನಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭವಿಷ್ಯ ನುಡಿದರು.
ಯಶವಂತಪುರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ವೇಳೆ ಮಾತನಾಡಿದ ಅವರು, ಬಿಜೆಪಿಯಲ್ಲೂ ಈಗ ಹೊರಗಿನಿಂದ ಬಂದವರು ಹಾಗೂ ಮೂಲ ಬಿಜೆಪಿಗರ ನಡುವೆ ಸಂಘರ್ಷ ಶುರುವಾಗಿದೆ. ಹಾಗಾಗಿ ಈ ಚುನಾವಣೆಯಲ್ಲಿ ನಾವು 15 ಸ್ಥಾನಗಳನ್ನೂ ಗೆಲ್ಲುತ್ತೇವೆ. ಬಳಿಕ ಯಡಿಯೂರಪ್ಪ ಸರ್ಕಾರ ಬಿದ್ದು ಹೋಗಲಿದೆ ಎಂದು ಹೇಳಿದರು.
ಸೋಮಶೇಖರ್ ನಿರ್ನಾಮ ಆಗುತ್ತಾರೆ:
ಈ ಚುನಾವಣೆ ಬಳಿಕ ಎಸ್.ಟಿ.ಸೋಮಶೇಖರ್ ನಿರ್ನಾಮವಾಗುತ್ತಾರೆ. ಸೋಮಶೇಖರ್ ಕಾಂಗ್ರೆಸ್ಗೆ ದ್ರೋಹ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ ಗುಂಡೂರಾವ್, ಸೋಮಶೇಖರ್ನ್ನು ಬಿಡಿಎ ಅಧ್ಯಕ್ಷರನ್ನಾಗಿ ಮಾಡಲು ನಾನು ಹೋರಾಟ ಮಾಡಿದೆ. ಅವರು ಹೇಳುವ ಪ್ರಕಾರ ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿಯವರು ಕಿರುಕುಳ ಕೊಟ್ಟಿದ್ದು ನಿಜವೇ ಆಗಿದ್ದರೆ ನಾವೆಲ್ಲರೂ ಕಾಂಗ್ರೆಸ್ ಬಿಟ್ಟು ಹೋಗಬೇಕಿತ್ತು. ಬಿಜೆಪಿಯಲ್ಲೂ ಸಹ ಎಸ್.ಟಿ.ಸೋಮಶೇಖರ್ರನ್ನು ಹೆಚ್ಚು ಕಾಲ ಇಟ್ಟುಕೊಳ್ಳುವುದಿಲ್ಲ. ಈ ಚುನಾವಣೆಯಲ್ಲಿ ಅವರು ಸೋಲುತ್ತಿದ್ದಂತೆಯೇ ಅವರನ್ನು ಬಿಜೆಪಿಯಿಂದಲೂ ಹೊರಹಾಕುತ್ತಾರೆ ಎಂದು ಗುಡುಗಿದರು.
ಡಾ. ಸುಧಾಕರ್ ಒಬ್ಬ ಮಹಾನ್ ಸುಳ್ಳುಗಾರ:
ಡಾ. ಸುಧಾಕರ್ ಒಬ್ಬ ಮಹಾನ್ ಸುಳ್ಳುಗಾರ ಎಂದು ಇದೇ ವೇಳೆ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು. ನಾನು ಗಾಂಧಿನಗರ ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿದ್ದೇನೆ. ಒಮ್ಮೆಯಾದರೂ ಯಾರಾದರೂ ನನ್ನ ಮೇಲೆ ಹಫ್ತಾ ವಸೂಲಿಯ ಆರೋಪ ಮಾಡಿದ್ದಾರಾ?. ಈಗ ಸುಧಾಕರ್ ಕಾಂಗ್ರೆಸ್ ಬಿಟ್ಟು ಹೋಗಿದ್ದೇ ಒಳ್ಳೆದಾಯ್ತು. ಇದರಿಂದ ನಮ್ಮ ಪಕ್ಷ ಶುದ್ಧವಾಯ್ತು. ಬಿಜೆಪಿ ಕಲುಷಿತಗೊಂಡಿದೆ. ಅವರಾಗಿಯೇ ಸುಧಾಕರ್ರನ್ನು ಸೇರಿಸಿಕೊಂಡು ಪಕ್ಷವನ್ನು ಕಲುಷಿತ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.