ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಹಿರಿಯ ಮುಖಂಡ ರಾಮಲಿಂಗಾರೆಡ್ಡಿಗೆ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಇಲ್ಲವೇ, ರಾಜ್ಯಸಭೆ ಸದಸ್ಯ ಸ್ಥಾನ ನೀಡುವ ಆಫರ್ನ್ನು ಬಿಜೆಪಿ ನೀಡಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಸರ್ಕಾರದಲ್ಲಿ ಒಂದು ವೇಳೆ ಉಪ ಮುಖ್ಯಮಂತ್ರಿಯಾಗಲು ಒಪ್ಪದೆ ಇದ್ದರೆ ರಾಜ್ಯಸಭೆಗೆ ನೇಮಕ ಮಾಡುವ ಭರವಸೆಯನ್ನು ಬಿಜೆಪಿ ಕೊಟ್ಟಿದೆ ಎನ್ನಲಾಗ್ತಿದೆ. ಇನ್ನು ರಾಮಲಿಂಗಾರೆಡ್ಡಿ ರಾಜ್ಯಸಭೆಗೆ ಆಯ್ಕೆಯಾದರೆ, ಅವರ ಪುತ್ರಿಯಾದ ಸೌಮ್ಯರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವ ಆಫರ್ನ್ನ ಬಿಜೆಪಿಯ ಹೈಕಮಾಂಡ್ ನೀಡಿದೆ ಎನ್ನಲಾಗಿದೆ.
ರಾಮಲಿಂಗಾರೆಡ್ಡಿಯವರು ಈಗ ಪ್ರತಿನಿಧಿಸುತ್ತಿರುವ ಬೆಂಗಳೂರಿನ ಬಿಟಿಎಂ ಲೇಔಟ್ ಕ್ಷೇತ್ರದಿಂದ ಜಯನಗರ ಕ್ಷೇತ್ರದ ಶಾಸಕಿ ಸೌಮ್ಯರೆಡ್ಡಿ ಸ್ಪರ್ಧೆ ಮಾಡುವುದು, ಸೌಮ್ಯರೆಡ್ಡಿ ಪ್ರತಿನಿಧಿಸಿರುವ ಜಯನಗರ ಕ್ಷೇತ್ರದಲ್ಲಿ ದಿ.ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರನ್ನು ಕಣಕ್ಕಿಳಿಸುವ ಯೋಚನೆಯನ್ನು ಬಿಜೆಪಿ ಹೊಂದಿದೆ ಎಂದು ತಿಳಿದು ಬಂದಿದೆ.
ಎಲ್ಲಾ ಆಯ್ಕೆಯನ್ನು ರಾಮಲಿಂಗಾರೆಡ್ಡಿ ಅವರಿಗೆ ಬಿಜೆಪಿ ಬಿಟ್ಟಿದೆ. ರಾಮಲಿಂಗಾರೆಡ್ಡಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ರಾಜೀನಾಮೆ ನೀಡುತ್ತಿರುವುದರಿಂದ ಬಂಪರ್ ಆಫರ್ನ್ನು ಬಿಜೆಪಿ ನೀಡಲು ಆಸಕ್ತಿ ತೋರಿದೆ ಎನ್ನಲಾಗುತ್ತಿದೆ.