ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ರಸ್ತೆಯ ವಾಣಿಜ್ಯ ಸಂಕೀರ್ಣದಲ್ಲಿ ನಕಲಿ ಮತದಾರರ ಗುರುತಿನ ಚೀಟಿ ತಯಾರಿಸುತ್ತಿದ್ದ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಠದ ವಕೀಲ ವಿನೋದ್ ಕುಮಾರ್ ಕೆಂಪೇಗೌಡ ರಸ್ತೆಯ ಪ್ರಭಾತ್ ಕಾಂಪ್ಲೆಕ್ಸ್‍ನ ಮೂರನೇ ಮಹಡಿಯಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್‍ನ ಮೊಹಮದ್ ಜಬೀವುಲ್ಲ ಎಂಬುವವರು ಮೂರು ತಿಂಗಳ ಹಿಂದೆ ಕಚೇರಿಯನ್ನು ಬಾಡಿಗೆಗೆ ಪಡೆದು ಬೆಂಗಳೂರು ಕೇಂದ್ರ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತಿದ್ದರು.
ಇದೇ ಕಚೇರಿಯಲ್ಲಿ ನಕಲಿ ಮತದಾರರ ಗುರುತಿನ ಚೀಟಿ ತಯಾರಿಸುತ್ತಿರುವ ಬಗ್ಗೆ ಬಿಜೆಪಿ ಚುನಾವಣಾ ಆಯೋಗದ ಗಮನಕ್ಕೆ ತಂದಿತ್ತು. ಈ ಕಚೇರಿಯಲ್ಲಿ 10-15 ವರ್ಷಗಳಿಂದ ಮತಹಾಕದ ಮತದಾರರ ನಕಲಿ ಗುರುತಿನ ಚೀಟಿಗಳನ್ನು ತಯಾರಿಸಲಾಗುತ್ತಿತ್ತು. ಉಪ್ಪಾರಪೇಟೆ ಪೊಲೀಸರು ಕಚೇರಿ ಮೇಲೆ ದಾಳಿ ನಡೆದ ವೇಳೆ 15 ಕಂಪ್ಯೂಟರ್‍ಗಳು, ಐದಾರು ಸ್ಕ್ಯಾನರ್‍ಗಳು, ಪ್ರಿಂಟರ್‍ಗಳು ಹಾಗೂ ಆಪ್ ಯಂತ್ರಗಳು ಪತ್ತೆಯಾಗಿವೆ. ಆದರೆ, ಪೊಲೀಸರು ಯಾರನ್ನೂ ಒಳಗೆ ಬಿಡದೆ ಬಾಗಿಲು ಹಾಕಿಕೊಂಡು ಮಹಜರು ನಡೆಸಿದ್ದಾರೆ. ಇದು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೇ ಪ್ರಕರಣ ದಾಖಲಿಸಿಕೊಳ್ಳಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್ ಪಕ್ಷ ಅಕ್ರಮ ಮಾರ್ಗದಲ್ಲಿ ಸಾಗುತ್ತಿದ್ದು, ಈ ಪ್ರಕರಣವನ್ನು ಚುನಾವಣಾ ಆಯೋಗ ಸಮಗ್ರ ತನಿಖೆ ನಡೆಸಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲೂ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಇದೇ ರೀತಿ ಅಕ್ರಮ ನಡೆಸಿತ್ತು. 420,465, 471 ಸೆಕ್ಷನ್‍ಗಳಡಿ ಪೊಲೀಸರು ಈ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.