ಬೆಂಗಳೂರು: ನಕಲಿ ಆಧಾರ್ ಕಾರ್ಡ್ ಮಾಡಿಕೊಡುವ ಜಾಲವನ್ನು ಮಟ್ಟಹಾಕಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ಬಿಜೆಪಿ, ಆಧಾರ್ ಕಾರ್ಡ್ ಅಕ್ರಮ ಆರೋಪ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ವಿಶಿಷ್ಟ ಗುರುತಿನ ಸಂಖ್ಯೆಯ ಪ್ರಾಧಿಕಾರ ( ಆಧಾರ್) ಮುಖ್ಯಸ್ಥರಿಗೆ ದೂರ ಸಲ್ಲಿಕೆ ಮಾಡಿದೆ.
ರೇಸ್ ಕೋರ್ಸ್ ರಸ್ತೆಯ ಖನಿಜ ಭವನದಲ್ಲಿರುವ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಕೆ ಎಸ್ ನವೀನ್ ಕುಮಾರ್ ನೇತೃತ್ವದ ಬಿಜೆಪಿ ನಿಯೋಗದಿಂದ ಆಧಾರ್ ಕಾರ್ಡ್ ಅಕ್ರಮ ಪ್ರಕರಣ ಗಂಭೀರ ವಿಚಾರವಾಗಿದ್ದು, ಸ್ಥಳೀಯ ತನಿಖಾ ಸಂಸ್ಥೆಗಳಿಂದ ಪ್ರಕರಣದ ತನಿಖೆ ಸಾಧ್ಯವಿಲ್ಲ, ವಿದೇಶಿ ಕೈವಾಡವಿರುವ ಸಾಧ್ಯತೆ ಇದೆ. ಹಾಗಾಗಿ ರಾಷ್ಟ್ರೀಯ ಭದ್ರತಾ ವಿಚಾರವೂ ಇದರಲ್ಲಿ ಸೇರಲಿದೆ ಅದಕ್ಕಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಮನವಿ ಸಲ್ಲಿಸಿತು.
ಆಧಾರ್ ಕಾರ್ಡ್ ಅಕ್ರಮದ ಬಗ್ಗೆ ಬಿಜೆಪಿ ನಿಯೋಗ ದೂರು ನೀಡಿದ ಬಳಿಕ ಮಾತನಾಡಿದ ಬಿಜೆಪಿ ಮುಖಂಡ ಭಾಸ್ಕರ್ ರಾವ್, ಕಾಂಗ್ರೆಸ್ ಸರ್ಕಾರ ಆಧಾರ್ ಕಾರ್ಡ್ ವಿಚಾರವನ್ನು ಬಹಳ ಹಗುರವಾಗಿ ತೆಗೆದುಕೊಳ್ಳುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಾಗಲ್ಲೆಲ್ಲ ರಾಜ್ಯವನ್ನ ದುರ್ಬಲವಾಗಿ ಮಾಡುವುದಕ್ಕೆ ಸಂಚು ಮಾಡುತ್ತಿದೆ. ರಾಷ್ಟ್ರ ವಿರೋಧಿ ಶಕ್ತಿಗಳಿಗೆ ಕುಮ್ಮಕ್ಕು ಕೊಡುತ್ತಿದೆ. 2016 ರಲ್ಲಿ ಐಟಿ ಆ್ಯಕ್ಟ್ ಅನುಮೋದನೆ ಮಾಡಬೇಕಿತ್ತು ಆದರೆ ಮಾಡಲಿಲ್ಲ. ಆಧಾರ್ ಆ್ಯಕ್ಟ್ ಮಾತ್ರ ಇದೆ, ದೇಶದ ಭದ್ರತೆಯ ಬಗ್ಗೆ ಕಾಂಗ್ರೆಸ್ ಚಲ್ಲಾಟ ಆಡುತ್ತಿದೆ. ಆಧಾರ್ ಕಾರ್ಡ್ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಯುಎಪಿಎ ಕಾಯ್ದೆಯಡಿ ಕೇಸ್ ಮಾಡಬೇಕಿತ್ತು ಆದರೆ ಮಾಡಿಲ್ಲ. ಅದರ ಬದಲು ಕೇವಲ ಪೊಲೀಸ್ ಠಾಣೆಗೆ ಕರೆಯಿಸಿ 10 ನಿಮಿಷ ವಿಚಾರಣೆ ಮಾಡಿ ಕಳುಹಿಸಿದ್ದಾರೆ. ಯಾರ ಮೇಲೂ ಕೇಸ್ ದಾಖಲು ಮಾಡಿಲ್ಲ ಎಂದು ಆರೋಪಿಸಿದರು.
ಇದೆಲ್ಲವನ್ನೂ ಗಮನಿಸಿದರೆ ಸರ್ಕಾರ ಕೆಲವು ದೊಡ್ಡ ವ್ಯಕ್ತಿಗಳಿಂದ ಪೊಲೀಸರ ಮೇಲೆ ಒತ್ತಡ ಇದೆ ಅಂತ ಗೊತ್ತಾಗುತ್ತಿದೆ. ಇದನ್ನು ಸಿಬಿಐಗೆ ನೀಡಬೇಕು ಎಂದು ಇದೇ ವೇಳೆ ಅವರು ಆಗ್ರಹಿಸಿದರು.
ಬಿಜೆಪಿ ಎಂಎಲ್ಸಿ ಕೆ ಎಸ್ ನವೀನ್, ಬೆಂಗಳೂರಿನಲ್ಲಿ ಹೆಬ್ಬಾಳ ಮತ್ತು ಗಂಗಮ್ಮ ಗುಡಿ ಖಾಸಗಿ ವ್ಯಕ್ತಿಗಳು ಆಧಾರ್ ದುರ್ಬಳಕೆ ಮಾಡಿ ವಿದೇಶಿಗರಿಗೆ ಆಧಾರ್ ಕಾರ್ಡ್ ಮಾಡಿ ಕೊಡ್ತಾಯಿದ್ದಾರೆ. ಅದರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ವಿದೇಶಿಗರಿಗೆ ಅಕ್ರಮ ಆಧಾರ್ ಕಾರ್ಡ್ ಮಾಡಿ ಕೊಡುತ್ತಿದೆ. ಬೆಂಗಳೂರಿನ ಶಾಂತಿ ಸುವ್ಯವಸ್ಥೆ ಹಾಳು ಮಾಡುವುದಕ್ಕೆ ಮುಂದಾಗಿದ್ದಾರೆ. ಕೂಡಲೇ ಈ ಪ್ರಕರಣಕ್ಕೆ ಸಂಬಂಧಿಸಿದವರನ್ನ ಬಂಧಿಸಬೇಕು. ಈ ವಿಚಾರವಾಗಿ ಆಧಾರ್ ಕಾರ್ಡ್ ಇಲಾಖೆಯ ಮುಖ್ಯಸ್ಥರಿಗೆ ದೂರು ನೀಡಿದ್ದೇವೆ. ಒಂದು ವೇಳೆ ಕಾಂಗ್ರೆಸ್ ಸರ್ಕಾರ ಇದನ್ನ ಇಲ್ಲಿಗೆ ನಿಲ್ಲಿಸಲಿಲ್ಲ ಎಂದರೆ ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿಬಿದ್ದ ಕೇಸರಿ ಪಡೆ: ಬೆಳಗಾವಿಯಲ್ಲಿ ಡಿಸಿ ಕಚೇರಿ ಮುಂದೆ ಧರಣಿ ಕುಳಿತ ಬಿಜೆಪಿ