ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ‘ಆಧುನಿಕ ಶಕುನಿ’ ಎಂದು ಸಂಬೋಧಿಸಿ ಅವರ ಘನತೆಗೆ ಚ್ಯುತಿ ತಂದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಬಿಜೆಪಿ ಪ್ರಕೋಷ್ಠ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ.
ಸುರ್ಜೇವಾಲಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆಧುನಿಕ ಶಕುನಿ, ಮೀಸಲಾತಿ ಮೂಲಕ ಜನರನ್ನು ಒಡೆದು ಸಂಘರ್ಷ ಸೃಷ್ಟಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅದು ಪತ್ರಿಕೆಗಳಲ್ಲೂ ಪ್ರಕಟವಾಗಿದೆ. ಈ ಹೇಳಿಕೆಯಿಂದ ಮುಖ್ಯಮಂತ್ರಿಗಳ ಗೌರವಕ್ಕೆ ಚ್ಯುತಿ ಉಂಟಾಗಿದೆ. ಈ ಹೇಳಿಕೆಯಿಂದ ಪಕ್ಷದ ಕಾರ್ಯಕರ್ತರು ಪ್ರಚೋದನೆಗೆ ಒಳಗಾಗುವ ಮತ್ತು ಕೆರಳುವ ಸಂಭವವಿದೆ. ಆದ್ದರಿಂದ ಇಂಥ ಹೇಳಿಕೆ ಕೊಟ್ಟ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದೆ.
ತಿರುಪತಿ ಮೇಲೆ ದಾಳಿ ಎಂದು ಸುಳ್ಳು ಆರೋಪ-ಬಿಜೆಪಿ ದೂರು: ತಿರುಪತಿ ತಿರುಮಲ ದೇವಸ್ಥಾನಕ್ಕೆ ಆರ್ಬಿಐ ವಿಧಿಸಿದ ದಂಡವನ್ನು ನರೇಂದ್ರ ಮೋದಿ ಅವರ ಬಿಜೆಪಿ ಸರ್ಕಾರ ತಿರುಪತಿ ಮೇಲೆ ದಾಳಿ ಮಾಡಿಸಿದೆ ಎಂದು ಸುಳ್ಳು ಆರೋಪ ಮಾಡಿ ಬಿಜೆಪಿ ವಿರುದ್ಧ ದುರುದ್ದೇಶಪೂರ್ವಕ ಹೇಳಿಕೆ ನೀಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ವಿರುದ್ಧ ಈ ಸಂಬಂಧ ಇನ್ನೊಂದು ದೂರು ನೀಡಲಾಗಿದೆ.
ಸುರ್ಜೇವಾಲಾ ಅವರು ಸೋಮವಾರ, ತಿರುಪತಿ ತಿರುಮಲ ದೇವಸ್ಥಾನಕ್ಕೆ ಆರ್ಬಿಐ ವಿಧಿಸಿದ ದಂಡವನ್ನು ಮೋದಿ ಅವರ ಬಿಜೆಪಿ ಸರ್ಕಾರ ತಿರುಪತಿ ಮೇಲೆ ದಾಳಿ ಮಾಡಿಸಿ 3.10 ಕೋಟಿ ದಂಡ ವಿಧಿಸಿದೆ ಎಂದು ಸುಳ್ಳು ಆರೋಪ ಮಾಡಿ, ಜನರ ಧಾರ್ಮಿಕ ಭಾವನೆಗಳು ಕೆರಳುವಂತೆ ಮಾಡಿದ್ದಾರೆ. ಈ ಮೂಲಕ ಸರ್ಕಾರದ ಮತ್ತು ಪಕ್ಷದ ವಿರುದ್ಧ ಜನತೆಯನ್ನು ಎತ್ತಿ ಕಟ್ಟುವ ಹುನ್ನಾರ ಮಾಡಿದ್ದಾರೆ. ಈ ರೀತಿಯ ಸುಳ್ಳು ಹೇಳಿಕೆಗಳು ಮುಂಬರುವ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಸಂಭವವಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಕೊಟ್ಟ ದೂರಿನಲ್ಲಿ ಬಿಜೆಪಿ ಉಲ್ಲೇಖಿಸಿದೆ.
ಸುರ್ಜೇವಾಲಾಗೆ ನೈತಿಕ ಹಕ್ಕಿಲ್ಲ- ಛಲವಾದಿ ನಾರಾಯಣಸ್ವಾಮಿ.. ದೂರಿನ ಬಳಿಕ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಸುರ್ಜೇವಾಲಾ ಮಾತನಾಡಿರುವುದು ಅಸಂಬದ್ಧ, ಅಸಂವಿಧಾನಿಕ. ನೀವು ಸಿಎಂಗೆ ಶಕುನಿ ಅಂದ್ರೆ ನಾವು ನಿಮ್ಮನ್ನು ಶಿಖಂಡಿ ಅಂತೀವಿ. ಈ ರೀತಿ ಕೆಟ್ಟ ಪದ ಬಳಕೆ ಸರಿಯಲ್ಲ. ಸುರ್ಜೇವಾಲಾಗೆ ನೈತಿಕ ಹಕ್ಕಿಲ್ಲ. ರಾಹುಲ್ ಗಾಂಧಿಯವರು ಇದೇ ಥರ ಟೀಕೆ ಮಾಡಿದ್ದಕ್ಕೆ ಎರಡು ವರ್ಷ ಶಿಕ್ಷೆ ಪ್ರಕಟ ಆಯ್ತು. ಸುರ್ಜೇವಾಲಾ ಸಿಎಂ ಕ್ಷಮೆ ಕೇಳಬೇಕು, ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.
ಸಿಎಂ ಕುರಿತು ಎಸ್ಡಿಪಿಐ ಮುಖಂಡನಿಂದ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಆವೇಶದಲ್ಲಿ ಅನೇಕರು ಏನೇನೋ ಮಾತಾಡ್ತಾರೆ. ಎಸ್ಡಿಪಿಐನವರು ಅಸಂವಿಧಾನಿಕವಾಗಿ ಮಾತಾಡಿದ್ದಾರೆ. ಹೀಗೆ ಮಾತಾಡುವಾಗ ಅವರ ಎಚ್ಚರ ವಹಿಸಲಿ. ಅವರು ಏನು ಬಿಚ್ಚಿಸ್ತೀವಿ ಅಂದಿದ್ದಾರೋ ಅದನ್ನ ಪೊಲೀಸರು ಬಿಚ್ಚಿಸ್ತಾರೆ. ಸಂವಿಧಾನದ ಮೇಲೆ ನಂಬಿಕೆ ಇರೋರು ಹೀಗೆಲ್ಲ ಮಾತಾಡಲ್ಲ. ಕೆಲವರನ್ನು ಕಾಂಗ್ರೆಸ್‌ನವರು ಎತ್ತಿ ಕಟ್ಟಿ ಗೊಂದಲ ಸೃಷ್ಟಿಸ್ತಿದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ:ಮತ್ತೆ ಮುಸ್ಲಿಂರಿಗೆ ಕಾಂಗ್ರೆಸ್ ಯಾವ ಒಬಿಸಿಯಿಂದ ಕಿತ್ತು ಮೀಸಲಾತಿ ಕೊಡುತ್ತೀರಿ: ತೇಜಸ್ವಿ ಸೂರ್ಯ ಪ್ರಶ್ನೆ