ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ನಿಯೋಗ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದೆ. ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಎರಡು ದೂರು ನೀಡಿದ್ದಾರೆ. ಬಳಿಕ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಕನಕಪುರದ ಬಳಿಯ ಸಾತನೂರಿನಲ್ಲಿ ಹಸುಗಳನ್ನು ವಾಹನದಲ್ಲಿ ಸಾಗಿಸುವ ಸಂದರ್ಭದಲ್ಲಿ ಕೆಲವು ಸಂಘಟನೆಗಳು ತಡೆ ಹಿಡಿದಿದ್ದಾರೆ. ಆದರೆ ಇದನ್ನು ಬಿಜೆಪಿ ಮೇಲೆ ಹಾಕಿದ್ದಾರೆ. ಟ್ವಿಟರ್‌ನಲ್ಲಿ ಬಿಜೆಪಿ ಪಕ್ಷ ಇದನ್ನು ಮಾಡಿಸಿದೆ ಎಂದು ಹೇಳಿದ್ದಾರೆ. ಈ ರೀತಿಯ ಕೀಳು ಆರೋಪ ಮಾಡುವುದು ಸರಿಯಲ್ಲ ಎಂದರು.
ಡಿ.ಕೆ.ಶಿವಕುಮಾರ್ ಅವರು, ದೇಶದ ಭವಿಷ್ಯ ಉಜ್ವಲಗೊಳಿಸಬೇಕಾದ ಯುವಕರ ಕೈಗೆ ಆಯುಧ ನೀಡಿ, ಅವರ ಭವಿಷ್ಯವನ್ನು ಬಿಜೆಪಿ ಹೇಗೆ ಹಾಳುಗೆಡವುತ್ತಿದೆ ಎಂಬುದಕ್ಕೆ ಸಾತನೂರಿನಲ್ಲಿ ನಡೆದ ಘಟನೆ ಸಾಕ್ಷಿ. ಆ ಮೂಲಕ ಬಿಜೆಪಿನೇ ಮಾಡಿಸುತ್ತಿದೆ ಎಂಬ ಅರ್ಥದಲ್ಲಿ ಫೇಸ್ ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಪೆನ್ನು ಹಿಡಿಯುವ ಕೈಯಲ್ಲಿ ಆಯುಧವನ್ನು ನೀಡುತ್ತಿದೆ ಎಂಬ ಅರ್ಥದಲ್ಲಿ ಡಿಕೆಶಿ ಅವರು ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ. ಡಿಕೆಶಿ ಈ ರೀತಿ ಒಂದು ಪಕ್ಷದ ಅಧ್ಯಕ್ಷರಾಗಿ ಕೀಳು ಅಭಿರುಚಿಯ ಹೇಳಿಕೆ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಈ ಮೂಲಕ ಯುವಕರಲ್ಲಿ ಗೊಂದಲ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಚುನಾವಣೆ ಹೊತ್ತಿನಲ್ಲಿ ಯುವಕರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ. ಅಲ್ಲದೇ ಬಿಜೆಪಿ ಬಗ್ಗೆ ತಪ್ಪು ಕಲ್ಪನೆಯನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಪಕ್ಷದ ತೇಜೋವಧೆ ಮಾಡುತ್ತಿದ್ದಾರೆ. ಇದರ ವಿರುದ್ಧ ಕ್ರಮ ಜರುಗಿಸಬೇಕಾಗಿ ಮುಖ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ತಿಳಿಸಿದರು. ಕಾಂಗ್ರೆಸ್ ಒಂದು ಮೀಮ್ ಆ್ಯಪ್ (Meme app) ಮಾಡಿದ್ದಾರೆ. ಈ ಆ್ಯಪ್ ಮೂಲಕ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ ಎಂದರು.
ಆ್ಯಪ್ನಲ್ಲಿ ನಿರುದ್ಯೋಗ ಅಂತ ಎಂದು ಸರ್ಚ್ ಮಾಡಿದರೆ, ನಿರುದ್ಯೋಗ ಸಮಸ್ಯೆ ನಾವು ಮಾತ್ರ ಬಗೆಹರಿಸುತ್ತೇವೆ ಎಂಬ ಅರ್ಥದಲ್ಲಿ ಕಾಂಗ್ರೆಸ್ ಆ್ಯಪ್ ತಯಾರಿಸಿದ್ದಾರೆ. ಬಿಜೆಪಿ ಎಂದು ಸರ್ಚ್ ಮಾಡಿದರೆ, ಸಾರಿ ನೋ ಇನ್ಫಾರ್ಮೆಶನ್, ಸಿಸ್ಟಮ್ ಫೆಲ್ಯೂರ್ ಎಂದು ಬರುತ್ತಿದೆ. ಚುನಾವಣಾ ಆಯೋಗದ ನಿಯಮ ಮೀರಿ ಆ್ಯಪ್ ಕ್ರಿಯೇಟ್ ಮಾಡಿದ್ದಾರೆ. ಇದು ಸೈಬರ್ ಕ್ರೈಮ್. ಈ ಎರಡು ಪ್ರಕರಣ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ : ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆಗೆ ಕ್ಷಣಗಣನೆ.. ಟಿಕೆಟ್ ಆಕಾಂಕ್ಷಿಗಳಲ್ಲಿ ಹೆಚ್ಚಿದ ಕುತೂಹಲ