ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಸಿಕ ಸಭೆ ಆರಂಭವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡ ಧರಿಸಿ ಬಿಜೆಪಿ ಪಾಲಿಕೆ ಸದಸ್ಯರು ಸಂಭ್ರಮ ಪಟ್ಟರು. ಲೋಕಸಭಾ ಚುನಾವಣೆಯ ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮಾಸ್ಕ್ ಧರಿಸಿ ಮೋದಿ, ಮೋದಿ ಎಂದು ಘೋಷಣೆ ಹಾಕಿ ಮೈತ್ರಿ ಪಕ್ಷದ ಸದಸ್ಯರನ್ನು ಕಿಚಾಯಿಸಿದರು.
ಈ ವೇಳೆ ಕೌನ್ಸಿಲ್ ಸಭೆಯಲ್ಲಿ ಮೋದಿ ಮಾಸ್ಕ್ ಧರಿಸಿದ್ದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿ, ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಮೋದಿ,ಮೋದಿ ಎಂದು ಘೋಷಿಸಿದರೆ, ಇವಿಎಂ ಪಕ್ಷ, ಇವಿಎಂ ಪಕ್ಷ ಎಂದು ಕಾಂಗ್ರೆಸ್ ಸದಸ್ಯರು ಘೋಷಣೆ ಹಾಕಿದರು. ಈ ವೇಳೆ ಕೌನ್ಸಿಲ್ ಸಭೆಯಲ್ಲಿ ಗದ್ದಲ, ಕೂಗಾಟ ಉಂಟಾಯಿತು.
ಮೀಡಿಯಾ ಪವರ್, ಮಸಲ್ ಪವರ್‌ನಿಂದ ಅಧಿಕಾರಕ್ಕೆ ಬಂದಿದ್ದಾರೆ ಎಂದು ಆಡಳಿತ ಪಕ್ಷದ ನಾಯಕ ವಾಜಿದ್ ಟೀಕಿಸಿದರು. ಇಡೀ ದೇಶವೇ ಬೆಂಬಲ ನೀಡಿ ಮತ್ತೆ ಮೋದಿಯವರು ಪ್ರಧಾನಿಯಾಗುತ್ತಿದ್ದಾರೆ. ಶತ್ರು ದೇಶಗಳಿಗೆ ಭಯ ಹುಟ್ಟಿಸಿದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಸಮರ್ಥಿಸಿಕೊಂಡರು.
ಈ ನಡುವೆ ಆಡಳಿತ ಪಕ್ಷದ ನಾಯಕ ವಾಜಿದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಬೆಂಗಳೂರು ವ್ಯಾಪ್ತಿಯ ಸಂಸದರಿಗೆ, ಕೋಲಾರದ ಸಂಸದರಾಗಿ ಆಯ್ಕೆಯಾಗಿರುವ ಪಾಲಿಕೆ ಸದಸ್ಯ ಮುನಿಸ್ವಾಮಿಯವರಿಗೆ ಅಭಿನಂದನೆ ಸಲ್ಲಿಸಿದರು.