ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಕಣ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಾರಣ ಕಾಪಿ-ಪೇಸ್ಟ್ ರಾಜಕಾರಣ. ಹೌದು, ಪ್ರಣಾಳಿಕೆ ವಿಚಾರದಲ್ಲಿ ಹಾಗೂ ಪೋಸ್ಟರ್ ಡಿಸೈನ್, ಪಾಂಪ್ಲೆಟ್ ಗಳನ್ನು ಯಥಾವತ್ತಾಗಿ ಕಾಪಿ ಮಾಡಲಾಗಿದೆ ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಕೇವಲ ಪ್ರಚಾರಕರು, ಸುಳ್ಳುಗಾರರು, ಅನರ್ಹರು, ನಕಲಿ ನಾಯಕರು ತುಂಬಿರುವ ಬಿಜೆಪಿಯಲ್ಲಿ ವಿಚಾರಕರು ಇಲ್ಲವೆಂದು ಲೇವಡಿ ಮಾಡಿದೆ. ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದ ಪ್ರಣಾಳಿಕೆಯನ್ನು ಯಥಾವತ್ತಾಗಿ ನಕಲು ಮಾಡಲಾಗಿದೆ. ಬಿಜೆಪಿ ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಒಂದೇ ಒಂದು ಸಾಲು 'ಕೃಪೆ: ಕರ್ನಾಟಕ ಕಾಂಗ್ರೆಸ್' ಎಂದು ಬರೆದು ಟೀಕಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಶಿವರಾಜು ಹಾಗೂ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಇಬ್ಬರ ಪ್ರಣಾಳಿಕೆ ಅಂಶಗಳು ಒಂದೇ ಆಗಿವೆ. ಜನಸ್ನೇಹಿ ಸಾರಿಗೆಗೆ ಸಂಕಲ್ಪ, ಪಾದಚಾರಿಗಳಿಗೆ ಅನುಕೂಲ, ಪಾರ್ಕಿಂಗ್ ವ್ಯವಸ್ಥೆ, ಬಸ್ ಸಂಖ್ಯೆ ಹೆಚ್ಚಳ ಮೊದಲಾದ ಪ್ರಣಾಳಿಕೆ ಅಂಶಗಳು ಸೇರಿದಂತೆ, ಅರ್ಹ ನಾಯಕ, ನಿಷ್ಠಾವಂತ ಸೇವಕ ಎಂಬ ಘೋಷವಾಕ್ಯಗಳನ್ನು ಬಿಜೆಪಿ ಕಾಪಿ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.