ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಬಿರುಸಿನ ಸಿದ್ಧತೆ ಕೈಗೊಂಡು, ಯಾತ್ರೆಗಳನ್ನು ಆರಂಭಿಸುತ್ತಿವೆ. ಬಿಎಸ್ವೈ ನೇತೃತ್ವದಲ್ಲಿ ಬಿಜೆಪಿ, ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಹೆಚ್ಡಿಕೆ ನೇತೃತ್ವದಲ್ಲಿ ಜೆಡಿಎಸ್ ಯಾತ್ರೆ ಮೂಲಕ ಜನರ ಬಳಿ ತೆರಳಲು ಮುಂದಾಗಿದ್ದಾರೆ. ಮೂವರು ಮಾಜಿ ಮುಖ್ಯಮಂತ್ರಿಗಳು ತಮ್ಮ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ಘೋಷಣೆಯೊಂದಿಗೆ ಆತ್ಮವಿಶ್ವಾಸದಿಂದ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿಯುತ್ತಿದ್ದಾರೆ.
2023 ರ ಮೇ ತಿಂಗಳಿನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳಲ್ಲಿ ಹೊಸ ಉತ್ಸಾಹ ಬಂದಿದೆ. ನಾಯಕರು ಹೊಸ ಹುಮ್ಮಸ್ಸಿನೊಂದಿಗೆ ಪಕ್ಷ ಸಂಘಟಿಸುತ್ತಿದ್ದಾರೆ. ದಾವಣಗೆರೆಯಲ್ಲಿ ಸಿದ್ದರಾಮೋತ್ಸವದ ಮೂಲಕ ಕಾಂಗ್ರೆಸ್ ಭರ್ಜರಿ ಶಕ್ತಿಪ್ರದರ್ಶನದ ಮೂಲಕ ಚುನಾವಣಾ ಕಣಕ್ಕೆ ಧುಮುಕುವ ಸುಳಿವು ನೀಡಿತ್ತು. ನಂತರ ರಾಜ್ಯದಲ್ಲಿ ನಡೆದ ರಾಹುಲ್ ಗಾಂಧಿ ಪಾದಯಾತ್ರೆ ಕಾಂಗ್ರೆಸ್ಗೆ ಹೊಸ ಶಕ್ತಿ ನೀಡಿದೆ. ಈ ಬೆನ್ನಲ್ಲೇ ಜನ ಸ್ಪಂದನ ಕಾರ್ಯಕ್ರಮದ ಮೂಲಕ ಆಡಳಿತಾರೂಢ ಬಿಜೆಪಿ ರಾಜ್ಯದಲ್ಲಿ ಭರ್ಜರಿ ಶಕ್ತಿ ಪ್ರದರ್ಶನ ಮಾಡುವ ಜೊತೆಗೆ ಜಿಲ್ಲಾ ಪ್ರವಾಸ ಕೈಗೊಂಡಿದೆ.
ಈ ಎರಡು ರಾಷ್ಟ್ರೀಯ ಪಕ್ಷಗಳ ಅಬ್ಬರಕ್ಕೆ ಸೆಡ್ಡು ಹೊಡೆದಿರುವ ಪ್ರಾದೇಶಿಕ ಪಕ್ಷ ಜೆಡಿಎಸ್, ಜನತಾ ಜಲಧಾರೆ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ಇಷ್ಟಕ್ಕೆ ಸುಮ್ಮನಾಗದೆ ರಾಜ್ಯದಲ್ಲಿ ನ.1ರಿಂದ ಪಂಚರತ್ನ ರಥಯಾತ್ರೆ ಆರಂಭಿಸಿ ಚುನಾವಣಾ ರಣ ಕಹಳೆ ಮೊಳಗಿಸಲು ಸಜ್ಜಾಗಿದೆ.
ಜೆಡಿಎಸ್ನಿಂದ ಪಂಚರತ್ನ ರಥಯಾತ್ರೆ: ನವೆಂಬರ್ 1 ರಂದು ರಾಜ್ಯದಲ್ಲಿ ಜೆಡಿಎಸ್ನ ಪಂಚರತ್ನ ರಥಯಾತ್ರೆ ಆರಂಭವಾಗಲಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ರಥಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಅದಕ್ಕೂ ಮೊದಲು ಗುರುವಾರ ಬೆಳಗ್ಗೆ ಬೆಂಗಳೂರಿನ ಗವಿಗಂಗಾಧರ ದೇವಸ್ಥಾನದಲ್ಲಿ ಒಂದು ರಥಕ್ಕೆ ಪೂಜೆ ನಡೆಸಲಾಗುತ್ತದೆ. 1994ರಲ್ಲಿ ಹೆಚ್.ಡಿ.ದೇವೇಗೌಡರು ಕುರುಡುಮಲೆಯಿಂದಲೇ ಚುನಾವಣಾ ಪ್ರಚಾರ ಆರಂಭ ಮಾಡಿದ್ದರು. ಆಗ ಅವರು ಅಮೋಘ ಬಹುಮತ ಗಳಿಸಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದ್ದರು. ಈಗ ಅಲ್ಲಿಂದಲೇ ಪಂಚರತ್ನ ರಥಯಾತ್ರೆ ಆರಂಭಿಸಿ ಮತ್ತೆ ವಿಜಯ ಪತಾಕೆ ಹಾರಿಸುವ ಸಿದ್ಧತೆಯನ್ನು ದಳಪತಿಗಳು ಸಿದ್ಧತೆ ನಡೆಸಿದ್ದಾರೆ.
ನವೆಂಬರ್ 1 ರಿಂದ 5ರವರೆಗೆ ಕೋಲಾರ ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳಲ್ಲಿ ರಥಯಾತ್ರೆ ನಡೆಯಲಿದೆ. ನ.6 ರಿಂದ 10 ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ, 11 ರಿಂದ 13 ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ, 14 ರಿಂದ 23ರ ವರೆಗೆ ತುಮಕೂರು ಜಿಲ್ಲೆಯಲ್ಲಿ, 24 ರಿಂದ 30ರ ವರೆಗೆ ಹಾಸನ ಜಿಲ್ಲೆಯಲ್ಲಿ, ಡಿಸೆಂಬರ್ 1 ರಂದು ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ ಡಿಸೆಂಬರ್ 2 ರಿಂದ 5ರ ವರೆಗೆ ರಾಮನಗರ ಜಿಲ್ಲೆಯಲ್ಲಿ ರಥಯಾತ್ರೆ ಸಂಚಾರ ಮಾಡಲಿದೆ. ಒಟ್ಟು 35 ದಿನಗಳ ಕಾಲ ನಡೆಯುವ ಮೊದಲ ಹಂತದ ರಥ ಯಾತ್ರೆಯಲ್ಲಿ ಅನೇಕ ಹಳ್ಳಿ, ಪಟ್ಟಣಗಳನ್ನು ತಲುಪಿ ಉದ್ಯೋಗ, ಶಿಕ್ಷಣ, ನೀರಾವರಿ, ಕೃಷಿ, ಆರೋಗ್ಯ, ಮಹಿಳಾ ಮತ್ತು ಯುವಜನ ಸಬಲೀಕರಣ ಕುರಿತಂತೆ ರೂಪಿಸಿರುವ ಪಂಚರತ್ನ ಯೋಜನೆ ವಿವರ ನೀಡಿ ಜೆಡಿಎಸ್ ನಾಯಕರು, ಜನರನ್ನು ಸೆಳೆಯಲಿದ್ದಾರೆ.
ಕಾಂಗ್ರೆಸ್ನಿಂದ ಬಸ್ ಯಾತ್ರೆ: ಜೆಡಿಎಸ್ ರಥಯಾತ್ರೆ ಬೆನ್ನಲ್ಲೇ ಕಾಂಗ್ರೆಸ್ ಬಸ್ ಯಾತ್ರೆಗೆ ಮುಂದಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಕೈ ನಾಯಕರು ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟಿಸಲಿದ್ದಾರೆ. ಇದಕ್ಕಾಗಿ ಎರಡು ಬಸ್ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಎರಡು ತಂಡಗಳಲ್ಲಿ ಬಸ್ ಮೂಲಕವೇ ರಾಜ್ಯ ಪ್ರವಾಸ ಮಾಡಲಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನತೆಯ ಮುಂದಿಟ್ಟು, ಕಾಂಗ್ರೆಸ್ ಸರ್ಕಾರದ ವೇಳೆ ಜಾರಿಗೆ ತರಲಾಗಿದ್ದ ಜನಪರ ಕಾರ್ಯಕ್ರಮಗಳನ್ನು ತಿಳಿಸಿ ಮತಯಾಚನೆ ಮಾಡಲಿದ್ದಾರೆ.
ಐಕ್ಯತಾ ಯಾತ್ರೆಯಿಂದ ಸೃಷ್ಟಿಯಾಗಿರುವ ಸಂಚಲನವನ್ನು ವಿಧಾನಸಭೆ ಚುನಾವಣೆವರೆಗೆ ಕಾಯ್ದಿಟ್ಟುಕೊಂಡು ಹೋಗಲು ಈ ಬಸ್ ಯಾತ್ರೆಗೆ ರಾಜ್ಯ ಕಾಂಗ್ರೆಸಿಗರು ಅಣಿಯಾಗಿದ್ದಾರೆ. ನವೆಂಬರ್ 2ನೇ ವಾರದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನೇತೃತ್ವದ ಎರಡು ಪ್ರತ್ಯೇಕ ತಂಡಗಳು ರಾಜ್ಯ ಪ್ರವಾಸ ಹೊರಡಲಿದ್ದು, ಪ್ರತಿ ತಂಡದಲ್ಲಿ 15 ಮುಂಚೂಣಿ ನಾಯಕರು ಸಾಥ್ ನೀಡಲಿದ್ದಾರೆ.
(ಓದಿ: ಕಲಬುರಗಿಯಲ್ಲಿ ಕೇಸರಿ ಬ್ರಿಗೇಡ್ ಬೃಹತ್ ಒಬಿಸಿ ಸಮಾವೇಶ.. ಚುನಾವಣೆಗೆ ರಹಕಣಳೆ)
ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ, ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸಮಾಲೋಚನೆ ನಡೆಸಿ ಬಸ್ ಯಾತ್ರೆಯ ರೂಪುರೇಷೆ ಅಂತಿಮಗೊಳಿಸಲಿದ್ದಾರೆ. ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ 15 ನಾಯಕರ ತಂಡವು ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹಾಗೂ ಸಿದ್ದರಾಮಯ್ಯ ನೇತೃತ್ವದ ತಂಡವು ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಯಾತ್ರೆ ನಡೆಸಲಿದೆ ಎನ್ನಲಾಗ್ತಿದೆ. ಪ್ರತಿದಿನ ಎರಡು ಕ್ಷೇತ್ರಗಳಂತೆ ಎಲ್ಲ 224 ವಿಧಾನಸಭಾ ಕ್ಷೇತ್ರಗಳನ್ನೂ ಯಾತ್ರೆ ಮೂಲಕ ತಲುಪಲು ನೀಲನಕ್ಷೆ ಸಿದ್ಧವಾಗಿದ್ದು, ನವೆಂಬರ್ 2ನೇ ವಾರದಲ್ಲಿ ಕೈ ಪಡೆಯ ಬಸ್ ಯಾತ್ರೆ ಆರಂಭಗೊಳ್ಳಲಿದೆ.
ಕೇಸರಿ ರಥಯಾತ್ರೆ: ಜೆಡಿಎಸ್ ರಥಯಾತ್ರೆ, ಕಾಂಗ್ರೆಸ್ ಬಸ್ ಯಾತ್ರೆ ನಡೆಸುವ ಘೋಷಣೆ ಬೆನ್ನಲ್ಲೇ ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ರಥಯಾತ್ರೆ ನಡೆಸುವ ಘೋಷಣೆ ಮೊಳಗಿಸಿದ್ದಾರೆ. ಪ್ರತಿಸ್ಪರ್ಧಿ ಪಕ್ಷಗಳು ಯಾತ್ರೆಗೆ ಮುಂದಾಗಿರುವಾಗ ನಾವು ಕೇವಲ ಪ್ರವಾಸಕ್ಕೆ ಸೀಮಿತವಾಗುವುದು ಸರಿಯಲ್ಲ ಎನ್ನುವ ಕಾರಣಕ್ಕಾಗಿ ರಥಯಾತ್ರೆ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ. ಈಗಾಗಲೇ ದೊಡ್ಡಬಳ್ಳಾಪುರದಲ್ಲಿ ಜನ ಸ್ಪಂದನ ಕಾರ್ಯಕ್ರಮ, ಕಲಬುರಗಿಯಲ್ಲಿ ಒಬಿಸಿ ವಿರಾಟ್ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ಮಾಡಿರುವ ಬಿಜೆಪಿ 100 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ನಡೆಸುತ್ತಿದೆ.
ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಒಂದು ತಂಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಎರಡನೇ ತಂಡ ತಲಾ 50 ಕ್ಷೇತ್ರಗಳ ಪ್ರವಾಸ ಆರಂಭಿಸಿದೆ. ಇದರ ನಡುವೆ ರೈತ ಮೋರ್ಚಾ, ಎಸ್ಸಿ, ಎಸ್ಟಿ, ಯುವ ಮೋರ್ಚಾ, ಮಹಿಳಾ ಮೋರ್ಚಾ ಸಮಾವೇಶಗಳಿಗೆ ಭರ್ಜರಿ ತಯಾರಿ ಆರಂಭಿಸಿದೆ. ಆದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಯಾತ್ರೆಗೆ ಪರ್ಯಾಯವಾಗಿ ಬಿಜೆಪಿಯಿಂದಲೂ ರಥ ಯಾತ್ರೆ ನಡೆಸಬೇಕು ಎನ್ನುವ ನಿರ್ಧಾರವನ್ನು ಯಡಿಯೂರಪ್ಪ ಪ್ರಕಟಿಸಿದ್ದಾರೆ.
ಹಳೆ ಮೈಸೂರಿನಲ್ಲಿ ಬಿಜೆಪಿಯನ್ನು ಬಲಪಡಿಸಲು ಮುಂದಾಗಿರುವ ಯಡಿಯೂರಪ್ಪ ಮೈಸೂರಿನಿಂದಲೇ ರಥಯಾತ್ರೆ ಆರಂಭಿಸಲು ನಿರ್ಧರಿಸಿದ್ದಾರೆ. ರಾಜ್ಯದ ಸಾಂಸ್ಕೃತಿಕ ರಾಜಧಾನಿಯಿಂದ ಆರಂಭಗೊಳ್ಳಲಿರುವ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದ್ದು, ಆಯಾ ಭಾಗದ ನಾಯಕರನ್ನು ಒಳಗೊಂಡು ಯಾತ್ರೆ ಸಾಗಲಿದೆ. ದಾವಣಗೆರೆಯಲ್ಲಿ ರಥಯಾತ್ರೆಯ ಭರ್ಜರಿ ಶಕ್ತಿ ಪ್ರದರ್ಶನದ ಮೂಲಕ ಸಿದ್ದರಾಮೋತ್ಸವಕ್ಕೂ ಟಾಂಗ್ ನೀಡಲು ನಿರ್ಧರಿಸಲಾಗಿದೆ. ರಥಯಾತ್ರೆಯ ರೂಪುರೇಷೆಗಳು ಇನ್ನಷ್ಟೇ ಸಿದ್ಧವಾಗಬೇಕಿದೆ. ನವೆಂಬರ್ನಲ್ಲಿಯೇ ಯಡಿಯೂರಪ್ಪ ಅವರ ಕೇಸರಿ ರಥಯಾತ್ರೆ ಆರಂಭವಾಗಲಿದೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಬಲಾಬಲ ಈಗಿನಿಂದಲೇ ಆರಂಭವಾಗಿದ್ದು, ಯಾತ್ರೆಗಳ ಜಾತ್ರೆಗೆ ಮುಂದಾಗಿವೆ. ಪ್ರಾದೇಶಿಕ ಪಕ್ಷ ಜೆಡಿಎಸ್ ಮೊದಲು ರಥಯಾತ್ರೆ ಆರಂಭಿಸಲಿದೆ. ನವೆಂಬರ್ 1 ರಂದು ಜೆಡಿಎಸ್ ಯಾತ್ರೆ ಆರಂಭಿಸಿದ 15 ದಿನದಲ್ಲಿ ಕಾಂಗ್ರೆಸ್ ಬಸ್ ಯಾತ್ರೆ ಆರಂಭಗೊಳ್ಳಲಿದೆ. ಬಹುತೇಕ ಅದೇ ಸಮಯದಲ್ಲಿ ಬಿಜೆಪಿಯ ರಥಯಾತ್ರೆಯೂ ಶುರುವಾಗಲಿದೆ. ಇನ್ನು ಎರಡು ಮೂರು ತಿಂಗಳು ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಯಾತ್ರೆಗಳದ್ದೇ ಅಬ್ಬರವಾಗಲಿದೆ.
(ಓದಿ: ಭಾರತ್ ಜೋಡೋ ನಂತರ ಸಿದ್ದು, ಡಿಕೆಶಿ ಉಭಯ ನಾಯಕರಿಂದ ಬಸ್ ಯಾತ್ರೆ)