ಬೆಂಗಳೂರು: ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ರಾಜ್ಯದಲ್ಲಿ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದು, ಈ ವಿಚಾರದಲ್ಲಿ ಸರ್ಕಾರ ಕಿವಿ ಹಿಂಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಬಿಜೆಪಿ ದೂರು ನೀಡಲಿದೆ ಎಂದು ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಹೇಳಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಚಟುವಟಿಕೆಗೆ ರಾಜಕಾರಣದಲ್ಲಿ ಅವಕಾಶ ಕೊಡಬಾರದು, ನಿಜಕ್ಕೂ ಈ ರೀತಿ ಕಾಂಗ್ರೆಸ್ ಪಕ್ಷದ ವರಿಷ್ಠರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು ಖಂಡನೀಯ. ಹಾಗಾಗಿ ನಾವು ರಾಜ್ಯಪಾಲರ ಮೊರೆ ಹೋಗಿ ಈ ವಿಚಾರದಲ್ಲಿ ಸರ್ಕಾರಕ್ಕೆ ಕಿವಿ ಹಿಂಡುವ ಕೆಲಸ ಮಾಡುವಂತೆ ಹಾಗೂ ಸೂಕ್ತ ಕ್ರಮ ವಹಿಸುವಂತೆ ರಾಜ್ಯಪಾಲರ ಗಮನಕ್ಕೆ ತರುತ್ತೇವೆ ಎಂದರು.
ಸುರ್ಜೇವಾಲಾ ಅಧಿಕಾರಿಗಳ ಸಭೆಗೆ ಹಾಜರಾಗಿದ್ದರಲ್ಲಿ ಬಹಳ ಮುಖ್ಯವಾಗಿ ಅವರ ನಿಜವಾದ ಉದ್ದೇಶ ಏನು ಎಂದು ಗೊತ್ತಿಲ್ಲ. ಆದರೆ, ಈ ರೀತಿ ಪಕ್ಷದ ಪದಾಧಿಕಾರಿಯೊಬ್ಬರು ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ, ಆದರೂ ಭಾಗವಹಿಸಿದ್ದಾರೆ. ಇದು ಸ್ಪಷ್ಟವಾಗಿ ಕಾನೂನು ಉಲ್ಲಂಘನೆಯಾಗಿದೆ. ಕಾನೂನು ಉಲ್ಲಂಘನೆ ಮಾಡುವುದು ಕಾಂಗ್ರೆಸ್ನ ಪರಿಪಾಠ, ಇದರ ಮುಂದುವರಿದ ಭಾಗವೇ ಸುರ್ಜೇವಾಲ ಅಧಿಕಾರಿಗಳ ಸಭೆಯಲ್ಲಿ ಭಾಗಿಯಾಗಿರುವುದು. ಹಾಗಾಗಿ ಇವರ ವಿರುದ್ಧ ಕ್ರಮಕ್ಕೆ ಅಗ್ರಹಿಸುತ್ತೇವೆ ಎಂದರು.
ಅಧಿಕಾರಿಗಳ ಈ ಸಭೆಯಲ್ಲಿ ಸುರ್ಜೇವಾಲಾ ಭಾಗವಹಿಸಬಾರದಿತ್ತು, ಅದರ ಉದ್ದೇಶಗಳೇನು ಎನ್ನುವುದು ಬೇರೆ ಮಾತು. ಆದರೆ, ಈ ರೀತಿ ಕಾನೂನು ಬದ್ಧವಾಗಿ ಇಂತಹ ಸಭೆಗಳಲ್ಲಿ ಭಾಗವಹಿಸಲು ಅವರಿಗೆ ಅಧಿಕಾರವಿಲ್ಲ ಅವರು ಭಾಗವಹಿಸಿದ್ದು ತಪ್ಪು. ಈ ವಿಚಾರವಾಗಿ ಬಿಜೆಪಿ ಟ್ವೀಟ್ ಮಾಡಿದೆ ಭ್ರಷ್ಟಾಚಾರದ ಆರೋಪ ಮಾಡಿದೆ. ಇದು ಸತ್ಯ ಇದ್ದರೂ ಇರಬಹುದು ಎಂದರು.
ಸಚಿವ ಪರಮೇಶ್ವರ್ ಬಹುಕಾಲದಿಂದ ಸಿಎಂ ಆಗುವ ಅಪೇಕ್ಷೆ ಹೊಂದಿದ್ದರು. ಹಾಗಾಗಿ ದಲಿತ ಸಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರ ಪಕ್ಷದ ನಿರ್ಣಯದ ಬಗ್ಗೆ ನಾನು ಮಾತನಾಡಲು ಸಾಧ್ಯವಿಲ್ಲ. ಅವರ ಪಕ್ಷದಲ್ಲಿ ಯಾರು ಮುಖ್ಯಮಂತ್ರಿ ಎಂದು ನಿರ್ಧಾರ ಮಾಡುತ್ತಾರೆ. ಆ ಪ್ರಕಾರವಾಗಿಯೇ ಈಗ ನಿಶ್ಚಯವಾಗಿದೆ. ಹಾಗಾಗಿ ಈ ವಿಚಾರದಲ್ಲಿ ನಾನು ಹೆಚ್ಚು ಮಾತನಾಡುವುದಿಲ್ಲ, ಅದು ಅವರ ಪಕ್ಷದ ನಿರ್ಧಾರ. ಆದರೂ ಪರಮೇಶ್ವರ್ ಅವರಿಗೆ ಅವಕಾಶ ಸಿಗಲಿ ಎಂದು ಶುಭ ಕೋರುತ್ತೇನೆ ಎಂದರು. ಹೊಂದಾಣಿಕೆ ರಾಜಕಾರಣದಿಂದ ಸೋಲಾಯಿತು ಎನ್ನುವ ಸಂಸದ ಪ್ರತಾಪ್ ಸಿಂಹ ಹೇಳಿಕೆ ಬಗ್ಗೆ ಮಾತನಾಡಲು ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ್ ನಿರಾಕರಿಸಿದರು.
ಮಧ್ಯಾಹ್ನ ದೂರು ಸಲ್ಲಿಕೆ: ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಭಾಗಿಯಾದ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ರಾಜಭವನ ಕದ ತಟ್ಟಲು ಬಿಜೆಪಿ ಮುಂದಾಗಿದೆ. ಇಂದು ಮಧ್ಯಾಹ್ನ ರಾಜ್ಯಪಾಲರಿಗೆ ದೂರು ಕೊಡಲು ಬಿಜೆಪಿ ನಾಯಕರು ತೀರ್ಮಾನ ಮಾಡಿದ್ದಾರೆ. ಮಾಜಿ ಡಿಸಿಎಂ ಆರ್ ಅಶೋಕ್ ನೇತೃತ್ವದಲ್ಲಿ ದೂರು ನೀಡಲು ನಿರ್ಧಾರ ಮಾಡಲಾಗಿದೆ. ಮಧ್ಯಾಹ್ನ 12.30 ಕ್ಕೆ ಅನುಮತಿ ಕೇಳಿದ್ದು, ರಾಜ್ಯಪಾಲರ ಕಚೇರಿಯಿಂದ ಅನುಮತಿ ಸಿಗುತ್ತಿದ್ದಂತೆ ರಾಜ್ಯಪಾಲರನ್ನು ಭೇಟಿಯಾಗಿ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಸುರ್ಜೇವಾಲ ಭಾಗಿಯಾಗಿದ್ದರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ದೂರು ಸಲ್ಲಿಸಲಿದ್ದಾರೆ.