ಬೆಂಗಳೂರು: ಹಿಜಾಬ್,ಆಜಾನ್ ಹಾಗೂ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಡೆಯನ್ನು ಮುಕ್ತವಾಗಿ ಪ್ರಶಂಸೆ ಮಾಡಿರುವ ಬಿಜೆಪಿ ವರಿಷ್ಠರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.
ನಂದಿಬೆಟ್ಟದ ಖಾಸಗಿ ರೆಸಾರ್ಟ್ನಲ್ಲಿ ನಡೆದ ಬಿಜೆಪಿ ಚಿಂತನ ಸಭೆಯಲ್ಲಿ ಸರ್ಕಾರದ ಒಂದು ವರ್ಷದ ಅವದಿಯ ಕಾರ್ಯವೈಖರಿ, ಸಾಧನೆಯ ಪರಾಮರ್ಶೆ ನಡೆಸಲಾಯಿತು. ಜಾಗತಿಕ ಸುದ್ದಿಯಾಗಿದ್ದ ಹಿಜಾಬ್ ವಿವಾದದಲ್ಲಿ ಸರ್ಕಾರದ ಎಚ್ಚರಿಕೆಯ ಹೆಜ್ಜೆ, ಆಜಾನ್ ವಿಚಾರದಲ್ಲಿ ಹೈಕೋರ್ಟ್ ಆದೇಶ ಜಾರಿ ಮಾಡುವಲ್ಲಿ ಅನುಸರಿಸಿದ ನೀತಿಗೆ ವರಿಷ್ಠರ ಪ್ರತಿನಿಧಿಯಾಗಿ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ಪಿಎಸ್ಐ ನೇಮಕಾತಿ ಅಕ್ರಮ ಆರೋಪ ಪ್ರಕರಣ ಚರ್ಚೆಗೆ ಬಂದಿತು. ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳ ಬಂಧನದ ವಿಚಾರ ಪ್ರಸ್ತಾಪಿಸಿದ ಸಂತೋಷ್, ಎಡಿಜಿಪಿ ಮಟ್ಟದ ಅಧಿಕಾರಿಯನ್ನು ಯಾವ ರಾಜ್ಯದಲ್ಲಿಯೂ ಬಂಧಿಸಿಲ್ಲ, ಅದೇ ರೀತಿ, ಐಎಎಸ್ ಅಧಿಕಾರಿಯನ್ನೂ ಬೇರೆ ರಾಜ್ಯದಲ್ಲಿ ಬಂಧಿಸಿಲ್ಲ. ಆದರೆ, ಭ್ರಷ್ಟಾಚಾರದ ಆರೋಪದ ಮೇಲೆ ಐಪಿಎಸ್ ಮತ್ತು ಐಎಎಸ್ ಅಧಿಕಾರಿಯ ಬಂಧನದ ಮೂಲಕ ಕರ್ನಾಟಕದಲ್ಲಿ ಭ್ರಷ್ಟಾಚಾರದಂತಹ ಯಾವುದೇ ಚಟುವಟಿಕೆಗೂ ಬೆಂಬಲ ಇಲ್ಲ ಎಂಬುದನ್ನು ರಾಜ್ಯ ಸರ್ಕಾರ ಸಾಬೀತುಪಡಿಸಿದೆ ಎಂದು ಸಂತೋಷ್ ಶ್ಲಾಘಿಸಿದ್ದಾರೆ.
ಪರಿಷತ್ ಸೋಲಿನ ಚರ್ಚೆ: ಸ್ಥಳೀಯ ಸಂಸ್ಥೆಗಳಿಂದ ಪರಿಷತ್ಗೆ ನಡೆದಿದ್ದ ಚುನಾವಣೆ ಹಾಗೂ ಶಿಕ್ಷಕ ಪದವೀಧರರ ಕ್ಷೇತ್ರದ ಚುನಾವಣೆ ಸೋಲಿನ ಕುರಿತು ಸಾಕಷ್ಟು ಚರ್ಚೆಯಾಯಿತು. ಸ್ಥಳೀಯ ಸಂಸ್ಥೆಗಳಿಂದ ನಡೆದ ಬೆಳಗಾವಿ ದ್ವಿ ಸದಸ್ಯ ಕ್ಷೇತ್ರದಲ್ಲಿ ಅನಾಯಾಸವಾಗಿ ಗೆಲ್ಲಬೇಕಿದ್ದ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಪರಾಜಯಗೊಂಡರು.
ನಂತರ ಶಿಕ್ಷಕರ, ಪದವೀಧರರ ಕ್ಷೇತ್ರದ ಚುನಾವಣೆ ವೇಳೆಯಲ್ಲಿಯೂ ಅರುಣ್ ಶಹಾಪುರ್ ಗೆಲ್ಲುವ ನಿರೀಕ್ಷೆ ಇದ್ದರೂ ಸೋತಿದ್ದಾರೆ ಇಲ್ಲಿ ಪಕ್ಷದ ನಾಯಕರು ಎಡವಿರುವುದು ಸ್ಪಷ್ಟ, ಪಕ್ಷ ವಿರೋಧಿ ನಿಲುವು ಇದಕ್ಕೆ ಕಾರಣ ಎಂದು ಸಂತೋಷ್ ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲೆಯ ಪ್ರಭಾವಿ ರಾಜಕಾರಣಿಗಳಾದ ಜಾರಕಿಹೊಳಿ ಸಹೋದರರಿಂದ ವಿವರಣೆ ಬಯಸಿದರು.
ಕುಟುಂಬದ ಮೇಲಿನ ಆರೋಪವನ್ನು ಸಭೆಯಲ್ಲಿಯೇ ರಮೇಶ್ ಜಾರಕಿಹೊಳಿ ತಳ್ಳಿಹಾಕಿದರು ಎನ್ನಲಾಗಿದೆ. ತನ್ನ ಕುಟುಂಬದ ಪಕ್ಷ ನಿಷ್ಟೆಯನ್ನು ಅನುಮಾನಿಸಬೇಡಿ, ಬೆಳಗಾವಿ ಲೋಸಕಭಾ ಉಪ ಚುನಾವಣೆ ವೇಳೆ ತಮ್ಮ ಸಹೋದರನನ್ನೇ ಸೋಲಿಸಿದ್ದೇವೆ ಎಂದು ಪರಿಷತ್ ಸೋಲಿಗೆ ತಾವು ಕಾರಣರಲ್ಲ ಎನ್ನುವ ಸಮಜಾಯಿಷಿ ನೀಡಿದರು.
ಇತರ ಚರ್ಚೆ: ಜುಲೈ 28 ರಂದು ದೊಡ್ಡಬಳ್ಳಾಪುರದಲ್ಲಿ ಸಮಾವೇಶ ನಡೆಸಲು ನಿರ್ಧರಿಸಿದ್ದು, ಆರು ವಿಭಾಗ ಮಾಡಿ ಜಿಲ್ಲಾವಾರು ಸಮಾವೇಶಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು. ಸಂಘಟನೆ ಚುರುಕುಗೊಳ್ಳಬೇಕು, ಬಿಬಿಎಂಪಿ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ ನಿರ್ಲಕ್ಷ್ಯ ಮಾಡಬಾರದು, ಇಲ್ಲಿ ಮೇಲುಗೈ ಸಾಧಿಸಿದಲ್ಲಿ ಮಾತ್ರ ವಿಧಾನಸಭಾ ಚುನಾವಣೆ ಗೆಲ್ಲಲು ಸಾಧ್ಯ, ವಿಧಾನಸಭೆ ಚುನಾವಣೆ ಗೆದ್ದಲ್ಲಿ ಲೋಕಸಭಾ ಚುನಾವಣೆಗೆ ಅನುಕೂಲವಾಗಲಿದೆ ಹಾಗಾಗಿ ಈ ಕಡೆ ಗಮನ ಕೊಡಬೇಕು ಎಂದು ವರಿಷ್ಠರು ಸೂಚಿಸಿದರು. .
ಸದ್ಯ ಯಾವ ವಿಚಾರದಲ್ಲಿ ವೈಫಲ್ಯವಾಗಿದೆ ಎಂದು ಪಟ್ಟಿ ಮಾಡಿ ಮತ್ತೆ ಅಂತಹ ವೈಫಲ್ಯ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ರೈತರ ಆದಾಯ ದ್ವಿಗುಣಗೊಳಿಸಲು ಕ್ರಮ : ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್