ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಆಗಿದ್ದ ರಮೀಳಾ ಉಮಾಶಂಕರ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಕಾವೇರಿಪುರಂ ವಾರ್ಡ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 78 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.
ಗಲಾಟೆ ಗದ್ದಲಗಳ ನಡುವೆ ನಡೆದ ಚುನಾವಣೆ ಮೈತ್ರಿ ಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಪ್ರತಿಷ್ಠೆಯ ಕಣವಾಗಿತ್ತು. ಚುನಾವಣಾ ಪ್ರಚಾರದ ವೇಳೆ ಮತ್ತು ಚುನಾವಣೆಯ ದಿನ ಬಿಜೆಪಿ ಮತ್ತು ಮೈತ್ರಿ ಪಕ್ಷಗಳ ಕಾರ್ಯಕರ್ತರ ನಡುವಿನ ಮಾರಾಮಾರಿಗೂ ಚುನಾವಣೆ ಸಾಕ್ಷಿಯಾಗಿತ್ತು.
ಮತಎಣಿಕೆಯ ಪ್ರತಿ ಹಂತದಲ್ಲೂ ಇಬ್ಬರು ಅಭ್ಯರ್ಥಿಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಕೊನೆಯ ಹಾಗು 9ನೇ ಸುತ್ತಿನ ಮತ ಎಣಿಕೆಯ ನಂತರ ಬಿಜೆಪಿ ಅಭ್ಯರ್ಥಿ ಪಲ್ಲವಿ ಚನ್ನಪ್ಪ, 9,507 ಮತ ಪಡೆದ್ರೆ, ಮೈತ್ರಿ ಅಭ್ಯರ್ಥಿ ಸುಶೀಲ ಸುರೇಶ್ 9,429 ಮತ ಪಡೆದುಕೊಂಡಿದ್ದರು. ಹೀಗಾಗಿ ಬಿಜೆಪಿ ಅಭ್ಯರ್ಥಿ ಪಲ್ಲವಿ ಚನ್ನಪ್ಪ 78 ಮತಗಳ ಅಂತರದಲ್ಲಿ ಗೆಲುವು ಸಾಧಿಸಿ, ವಿಜಯ ಪತಾಕೆ ಹಾರಿಸಿದರು.
ಗೆಲುವಿನ ಖುಷಿಯಲ್ಲಿ ಮಾತನಾಡಿದ ಪಲ್ಲವಿ ಚನ್ನಪ್ಪ, ಈ ಗೆಲುವನ್ನು ಪಕ್ಷದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಅರ್ಪಿಸುತ್ತೇನೆ. ಜೆಡಿಎಸ್ ಮತ್ತು ಕಾಂಗ್ರೆಸ್ ಭದ್ರಕೋಟೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಗೆದ್ದಿದೆ. ನನಗೆ ಸಿಗುವ 15 ತಿಂಗಳ ಕಾಲಾವಧಿಯಲ್ಲಿ ಒಳ್ಳೆಯ ಅಭಿವೃದ್ಧಿ ಕಾರ್ಯ ಮಾಡುತ್ತೇನೆ ಎಂದು ಭರವಸೆ ನೀಡಿದರು.