ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಚಿವ ಎಸ್.ಟಿ.ಸೋಮಶೇಖರ್ ಅವರು ಒಟ್ಟು 27.88 ಕೋಟಿ ರೂ. ಮೊತ್ತದ ಆಸ್ತಿ ಹೊಂದಿದ್ದು, ತಮ್ಮ ಕುಟುಂಬದವರಿಗೆ 2.46 ಕೋಟಿ ರೂ. ಸಾಲ ನೀಡಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರ ಪ್ರಮಾಣಪತ್ರದಲ್ಲಿ ಈ ಮಾಹಿತಿ ಇದೆ.
ಸೋಮಶೇಖರ್ ವಿವಿಧ ಬ್ಯಾಂಕ್‌ಗಳಲ್ಲಿ 2.76 ಕೋಟಿ ರೂ. ನಗದು ಹೊಂದಿದ್ದಾರೆ. ಪತ್ನಿ ಎನ್.ರಾಧಾ ಅವರು ವಿವಿಧ ಬ್ಯಾಂಕ್‌ಗಳಲ್ಲಿ 24.36 ಲಕ್ಷ ರೂ. ನಗದು ಹೊಂದಿದ್ದರೆ, ಪುತ್ರ ಎಸ್. ನಿಶಾಂತ್ ಬ್ಯಾಂಕ್‌ಗಳಲ್ಲಿ 25.30 ಲಕ್ಷ ರೂ. ನಗದನ್ನು ಹೊಂದಿದ್ದಾರೆ. ಸೋಮಶೇಖರ್ ಹೆಸರಲ್ಲಿ 5.46 ಕೋಟಿ ರೂ. ಮೌಲ್ಯದ ಚರಾಸ್ತಿ, 8.91 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ರಾಧಾ ಹೆಸರಲ್ಲಿ 53.86 ಲಕ್ಷ ರೂ. ಮೌಲ್ಯದ ಚರಾಸ್ತಿ, 8.72 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ. ನಿಶಾಂತ್ ಹೆಸರಲ್ಲಿ 48.18 ಲಕ್ಷ ರು. ಚರಾಸ್ತಿ, 3.75 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಆಸ್ತಿ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
1.22 ಕೋಟಿ ರೂ. ಸಾಲವನ್ನು ಹೊಂದಿರುವ ಸೋಮಶೇಖರ್ ಅವರು ತಮ್ಮ ಕುಟುಂಬದ ಸದಸ್ಯರಿಗೆ 2.46 ಕೋಟಿ ರೂ. ಸಾಲ ನೀಡಿದ್ದಾರೆ. ಇದರಲ್ಲಿ ಪುತ್ರನಿಗೆ ಅಧಿಕವಾಗಿ ಸಾಲ ನೀಡಿದ್ದು, 1.23 ಕೋಟಿ ರೂ. ಸಾಲ ನೀಡಲಾಗಿದೆ. ಪತ್ನಿಗೆ 16 ಲಕ್ಷ ರೂ., ತಾಯಿ ಸೀತಮ್ಮ ಅವರಿಗೆ ಒಂದು ಕೋಟಿ ರು. ಸಾಲ ನೀಡಿದರೆ, ಸಹೋದರ ಎಸ್.ಟಿ.ಶ್ರೀನಿವಾಸ್‌ಗೆ 6.50 ಲಕ್ಷ ರು. ಸಾಲ ನೀಡಿರುವ ಬಗ್ಗೆ ಮಾಹಿತಿ ಒದಗಿಸಲಾಗಿದೆ. ಸೋಮಶೇಖರ್ ಬಳಿ 13.05 ಲಕ್ಷ ರೂ. ಮೌಲ್ಯದ 450 ಗ್ರಾಂ ಚಿನ್ನ ಇದೆ. ರಾಧಾ ಅವರ ಬಳಿ 26.10 ಲಕ್ಷ ರು. ಮೌಲ್ಯದ 900 ಗ್ರಾಂ ಚಿನ್ನ, 3.30 ಲಕ್ಷ ರು. ಮೌಲ್ಯದ 6 ಕೆಜಿ ಬೆಳ್ಳಿ ಇದೆ. ಅಂತೆಯೇ ಪುತ್ರನ ಬಳಿ 8.70 ಲಕ್ಷ ರು. ಮೌಲ್ಯದ 300 ಗ್ರಾಂ ಚಿನ್ನ ಇದೆ. ಸೋಮಶೇಖರ್ ಮತ್ತು ಪತ್ನಿಯ ಹೆಸರಲ್ಲಿ ಯಾವುದೇ ವಾಹನ ಇಲ್ಲ. ಆದರೆ, ಮಗನ ಹೆಸರಲ್ಲಿ 93,570 ರೂ. ಮೌಲ್ಯದ ಹೊಂಡಾ ಗ್ರಾಸಿಯಾ ದ್ವಿಚ್ರಕವಾಹನ ಇದೆ ಎಂದು ನಮೂದಿಸಲಾಗಿದೆ.
ಮಂಗಳೂರಿನಲ್ಲಿ ನಾಮಪತ್ರ ಸಲ್ಲಿಕೆ : ನಾಮಪತ್ರ ಸಲ್ಲಿಕೆಯ ಮೊದಲ ದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ನಾಮಪತ್ರಗಳು ಸಲ್ಲಿಕೆಯಾಗಿದೆ. ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಯಶೋಧ ಹಾಗೂ ಜೆ.ಡಿ.ಯು ಪಕ್ಷದ ಅಭ್ಯರ್ಥಿಯಾಗಿ ಸುಪ್ರೀತ್ ಕುಮಾರ್ ಪೂಜಾರಿ ಅವರು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಉಳಿದಂತೆ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ, ಮೂಡಬಿದ್ರೆ ವಿಧಾನಸಭಾ ಕ್ಷೇತ್ರ, ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ, ಮಂಗಳೂರು ವಿಧಾನಸಭಾ ಕ್ಷೇತ್ರ, ಬಂಟ್ವಾಳ ವಿಧಾನ ಸಭಾ ಕ್ಷೇತ್ರ, ಪುತ್ತೂರು ವಿಧಾನಸಭಾ ಕ್ಷೇತ್ರ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ಮೇ.10 ರಂದು ಮತದಾನ ನಡೆಯಲಿದ್ದು. ಮೇ. 13 ರಂದು ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
ಇದನ್ನೂ ಓದಿ : ಬಿಜೆಪಿಗೆ ಗುಡ್ ಬೈ ಹೇಳಿದ ಮತ್ತೋರ್ವ ಬೆಳಗಾವಿಯ ಮಾಜಿ ಸಚಿವ