ಬೆಂಗಳೂರು: ಇದು ನನ್ನ ಗೆಲುವಲ್ಲ, ಆರ್ಆರ್ ನಗರ ಕ್ಷೇತ್ರದ ಜನರ ಗೆಲುವು, ದಿನದಲ್ಲಿ 20 ಗಂಟೆ ಕ್ಷೇತ್ರಕ್ಕಾಗಿ ಮೀಸಲಿಡುತ್ತೇನೆ, ಹಳೆ ಬೆಂಗಳೂರು ಮಾದರಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ವಿಜೇತ ಅಭ್ಯರ್ಥಿ ಮುನಿರತ್ನ ಭರವಸೆ ನೀಡಿದ್ದಾರೆ.
ಆರ್ಆರ್ ನಗರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಮುನಿರತ್ನ ಮತ ಎಣಿಕೆ ಕೇಂದ್ರದಲ್ಲಿ ಚುನಾವಣಾಧಿಕಾರಿಗಳಿಂದ ಗೆಲುವಿನ ಪ್ರಮಾಣ ಪತ್ರ ಸ್ವೀಕರಿಸಿದರು. ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲ ಮತದಾರರ ಪಾದಗಳಿಗೆ ವಂದಿಸುತ್ತೇನೆ. ಈ ದಿನದಿಂದ ಈ ಕ್ಷೇತ್ರಕ್ಕೆ ಪ್ರತಿದಿನ 20 ಗಂಟೆ ಕೆಲಸ ಮಾಡುವ ತೀರ್ಮಾನ ಮಾಡಿದ್ದೇನೆ, 50 ವರ್ಷದಿಂದ ಹಳೆ ಬೆಂಗಳೂರು ಅಭಿವೃದ್ಧಿ ಆಗುತ್ತಿದೆ ಅದಕ್ಕೆ ಸರಿಸಮನಾಗಿ ಆರ್ಆರ್ ನಗರ ಅಭಿವೃದ್ಧಿ ಮಾಡುವ ಗುರಿ ಇರಿಸಿಕೊಂಡಿದ್ದೇನೆ, ಮತದಾರರ ಋಣ ತೀರಿಸುವ ಕೆಲಸ ಮಾಡಲಿದ್ದೇನೆ ಎಂದರು.
ಎಲ್ಲಾ ಅಧಿಕಾರಿ ವರ್ಗದವರು ಸಹ ನ್ಯಾಯಯುತ ಚುನಾವಣೆ ಮಾಡಿದ್ದು ಅವರಿಗೆ ಧನ್ಯವಾದ ತಿಳಿಸುತ್ತೇನೆ. ಮುಂದಿನ ದಿನದಲ್ಲಿ ಕ್ಷೇತ್ರದಲ್ಲಿ ಎಲ್ಲರ ಜೊತೆ ಸೇರಿ ಒಟ್ಟಾಗಿ ಕೆಲಸ ಮಾಡಲಿದ್ದೇನೆ, ಓರ್ವ ಹೆಣ್ಣು ಮಗಳು ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದರು ಅದೇ ರೀತಿ ಜೆಡಿಎಸ್ ಪಕ್ಷದಿಂದ ನನ್ನ ಆತ್ಮೀಯರು, ನಾನು ಶಾಸಕ ಆದಾಗ ಅವರು ಪಾಲಿಕೆ ಸದಸ್ಯರಾಗಿದ್ದರು ಅವರಿಗೆ ಒಳ್ಳೆಯದಾಗಲಿ ಎಂದರು.
ಜನಸೇವೆ ಪೂರ್ವಜನ್ಮದ ಪುಣ್ಯ, ಅಂತಹ ಆಶೀರ್ವಾದ ಕ್ಷೇತ್ರದ ಜನ ಮಾಡಿದ್ದಾರೆ, ನಾನು ಅವರ ಋಣದಲ್ಲಿದ್ದೇನೆ, ಜನರ ಸೇವೆ ಮಾಡಲಿದ್ದೇನೆ. ನಮ್ಮ ಪಕ್ಷ, ಸಿಎಂ, ರಾಜ್ಯಾಧ್ಯಕ್ಷರು, ಸಚಿವರು, ಶಾಸಕ, ಹೊರಭಾಗದಿಂದ ಬಂದ ಕಾರ್ಯಕರ್ತರು, ಮುಖಂಡರು ಎಲ್ಲರಿಗೂ ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ನಾನು ಪಕ್ಷಕ್ಕೆ ಸೇರಿದ್ದು ಪಕ್ಷ ನನ್ನನ್ನು ಗುರುತಿಸಿ ಟಿಕೆಟ್ ನೀಡಿತ್ತು. 58 ಸಾವಿರ ಅಂತರದ ಗೆಲುವು ಬರಲು ಎಲ್ಲರ ಶ್ರಮ ಇದೆ, ಸಚಿವ ಸ್ಥಾನ ನೀಡುವುದು ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಕಟೀಲ್, ಹೈಕಮಾಂಡ್ಗೆ ಬಿಟ್ಟ ವಿಷಯ. ಇಂತಹ ಖಾತೆ ಬೇಕು ಎಂದು ನಾನು ಕೇಳಲ್ಲ, ಅದು ಸಿಎಂ, ವರಿಷ್ಠರಿಗೆ ಬಿಟ್ಟ ವಿಷಯ. ನಾನು ಕಾರ್ಯಕರ್ತನಾಗಿ ಕೆಲಸ ಮಾಡಲಿದ್ದೇನೆ ಎಂದರು.
ನನ್ನ ಶಾಲೆಯ ಪ್ರಮಾಣ ಪತ್ರ ಮುನಿರತ್ನ, ಡಿಎಲ್ ಮುನಿರತ್ನ, ಆದಾಯ ತೆರಿಗೆ ಅರ್ಜಿ ಮುನಿರತ್ನ, ಜನ್ಮದಾಖಲೆ ಮುನಿರತ್ನ, ಪಾಸ್ ಪೋರ್ಟ್ ಸೇರಿ ಎಲ್ಲದರಲ್ಲಿಯೂ ಮುನಿರತ್ನ ಮಾತ್ರ ಇದೆ ಆದರೆ ಕೆಲವರು ನಾಯ್ಡು ಹೆಸರು ಸೇರಿಸಿಕೊಂಡು ಹೇಳುತ್ತಾರೆ ಇನ್ಮೇಲಾದರೂ ಅದನ್ನು ಬಿಡಲಿ ಎಂದರು.
ನಾನು ಮತದಾರರ ಬಳಿ ಭಿಕ್ಷೆ ಕೇಳಿದ್ದೆ. ಮತಭಿಕ್ಷೆ ಪಡೆದಿದ್ದೇನೆ ಈಗ ಅವರ ಸೇವೆ ಮಾಡುತ್ತೇನೆ. ಆದರೆ ಅಧಿಕಾರ ದುರ್ಬಳಕೆ ಮಾಡುಕೊಂಡು ಚುನಾವಣೆ ಗೆದ್ದ ಆರೋಪವನ್ನು ಸಿದ್ದರಾಮಯ್ಯ ಮಾಡಿದ್ದಾರೆ ಹಾಗಾದರೆ ನಂಜನಗೂಡು, ಗುಂಡ್ಲುಪೇಟೆಯಲ್ಲೂ ಅಧಿಕಾರ ದುರ್ಬಳಕೆಯಾಗಿತ್ತಾ? ಗೆದ್ದಾಗ ಇಂತಹ ಆರೋಪ ಒಳ್ಳೆಯದಲ್ಲ ಎಂದರು.