ಬೆಂಗಳೂರು : ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿ ಬಿರುಸಿನ ಪ್ರಚಾರ ಮುಂದುವರೆದಿದ್ದು, ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಪರ ನಟಿ ತಾರಾ ಅನುರಾಧ ಅವರು ಸೂಲಿಕೆರೆ, ಕೊಮ್ಮಘಟ್ಟ, ಚಿಕ್ಕನಹಳ್ಳಿ, ಚಿಕ್ಕಬಸ್ತಿ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ತಾರಾ ಅನುರಾಧ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಬಿಜೆಪಿಯೊಂದೇ ಭರವಸೆ ಉಳಿಸಿಕೊಂಡಿರುವುದು. ಅಲ್ಪಸಂಖ್ಯಾತರ ವಿಷಯದಲ್ಲೂ ಬಿಜೆಪಿ ಆಶಾಕಿರಣವಾಗಿದೆ. ತ್ರಿವಳಿ ತಲಾಖ್ ರದ್ದು ಮಾಡಿದ್ದು ಅದಕ್ಕೆ ಸಾಕ್ಷಿ ಎಂದು ಹೇಳಿದರು. ರಾಜ್ಯದಲ್ಲೂ ಯಡಿಯೂರಪ್ಪನವರ ಸರ್ಕಾರ ಮುಂದುವರಿಯಬೇಕಾದರೆ ಯಶವಂತಪುರದಲ್ಲಿ ಸೋಮಶೇಖರ ಗೌಡರು ಗೆಲ್ಲಬೇಕೆಂದರು.
ಸೂಲಿಕೆರೆ ಗ್ರಾಮದಲ್ಲಿ ನಡೆದ ಪ್ರಚಾರದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಟಿ ಸೋಮಶೇಖರ್, ನಾನು ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದೇನೆ. ನನ್ನ ಮೇಲೆ ಯಾವುದೇ ಕ್ರಿಮಿನಲ್ ಕೇಸ್‌ಗಳಿಲ್ಲ ಎಂದರು. ಕಳೆದ ಇಪ್ಪತ್ತು ವರ್ಷಗಳಿಂದ ನಾನು ಕ್ಷೇತ್ರದ ಜನರ ಜತೆ ಇದ್ದೇನೆ. ಚುನಾವಣೆಯಲ್ಲಿ ಸೋತಾಗಲೂ ಸಹ ನಾನು ಕ್ಷೇತ್ರ ಬಿಟ್ಟು ಹೋಗಿಲ್ಲ. ಅದೇ ಜವರಾಯಿಗೌಡರು ತಮ್ಮ ಮೇಲೆ ಎಷ್ಟು ಕ್ರಿಮಿನಲ್ ಕೇಸ್ಗಳಿವೆ ಎಂಬುದನ್ನು ತಾವೇ ಘೋಷಿಸಿಕೊಂಡಿದ್ದಾರೆ. ಅಲ್ದೇ, ಚುನಾವಣೆ ಮುಗಿಯುತ್ತಿದ್ದಂತೆ ಕಾಣೆಯಾಗುತ್ತಾರೆ. ಐದು ವರ್ಷ ಕ್ಷೇತ್ರದ ಕಡೆಗೆ ತಿರುಗಿಯೂ ನೋಡಲ್ಲ ಎಂದು ಟೀಕಿಸಿದರು.
ಯಡಿಯೂರಪ್ಪನವರು ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ. ಅದರ ಜತೆಗೆ ಮೇಲ್ಸೇತುವೆ, ಮಾಗಡಿ ರಸ್ತೆಗೆ ಮೆಟ್ರೋ ಸಂಪರ್ಕ ಹಾಗೂ ಕಾವೇರಿ ಕುಡಿಯುವ ನೀರಿನ ಪೂರೈಕೆ ಯೋಜನೆಗಳನ್ನು ನಾವು ಪ್ರಾರಂಭಿಸಿದ್ದೆವು. ಅದನ್ನು ಮುಂದುವರಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವವರು ಯಡಿಯೂರಪ್ಪನವರು, ಹಾಗಾಗಿ ಯಶವಂತಪುರದ ಜನ ಅವರ ಮಾತನ್ನು ನಂಬುತ್ತಾರೆ ಎಂದರು.