ಬೆಂಗಳೂರು: ಬಿಜೆಪಿ ಶಾಸಕರ ಅಮಾನತು ಖಂಡಿಸಿ ಹಾಗೂ ಸ್ಪೀಕರ್ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಾಸಕರು ವಿಧಾನಸೌಧದಿಂದ ರಾಜಭವನಕ್ಕೆ ಕಾಲ್ನಡಿಗೆ ಮೂಲಕ ತೆರಳಿ ರಾಜ್ಯಪಾಲರಿಗೆ ದೂರು ನೀಡಿದರು. ಜೆಡಿಎಸ್ ಪಕ್ಷದವರೂ ಕೂಡ ಬಿಜೆಪಿ ನಿಯೋಗದ ಜೊತೆ ತೆರಳಿದ್ದು, ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ರಾಜ್ಯಪಾಲರ ಭೇಟಿ ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕಳೆದ ಮೂರು ವಾರದಲ್ಲಿ ಸದನದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ರಾಜ್ಯಪಾಲರಿಗೆ ನೀಡಿದ್ದೇವೆ. ಏಕಕಾಲದಲ್ಲಿ 10 ಜನರನ್ನು ಅಮಾನತು ಮಾಡಿರುವುವುದು ಕರ್ನಾಟಕ ವಿಧಾನಸಭೆ ಇತಿಹಾಸದಲ್ಲಿಯೇ ಇಲ್ಲ. ಇದು ಸರ್ಕಾರದ ಸರ್ವಾಧಿಕಾರಿ ಧೋರಣೆಯಾಗಿದೆ. ವಿರೋಧ ಪಕ್ಷವನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಗ್ಯಾರಂಟಿ ಭರವಸೆಗಳನ್ನು ಈಡೇರಿಸಲು ಆಗದೆ ವೈಫಲ್ಯ ಮುಚ್ಚಿ ಹಾಕಲು ಈ ರೀತಿ ತಂತ್ರಗಳನ್ನು ಬಳಸುತ್ತಿದೆ. ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಂಗ್ರೆಸ್ ಸರ್ಕಾರ ಬುಡಮೇಲು ಮಾಡುತ್ತಿದೆ. ಸ್ವಾರ್ಥ ಲಾಭಕ್ಕಾಗಿ ರಾಜಕೀಯ ರೊಟ್ಟಿಯನ್ನು ಬೇಯಿಸುತ್ತಿದ್ದಾರೆ. ಸ್ಪೀಕರ್ ಅವರು ರಾಜಕೀಯ ಪಕ್ಷವು ಆಯೋಜಿಸಿದ್ದ ಭೋಜನ ಕೂಟದಲ್ಲಿ ಭಾಗಿಯಾಗಿದ್ದಾರೆ. ಇದು ಶಿಷ್ಟಾಚಾರ ಉಲ್ಲಂಘನೆ ಆಗಿದೆ. ಇದರಿಂದ ಸ್ಪೀಕರ್ ಹಾಗೂ ವಿಧಾನಸಭೆಯ ಗೌರವ ಯಾವ ಮಟ್ಟಕ್ಕೆ ಇಳಿದಿದೆ ಎಂಬುದು ಸಾಬೀತಾಗಿದೆ. ಇದನ್ನು ಸುಮ್ಮನೆ ಕುಳಿತುಕೊಂಡು ನೋಡಲು ಆಗಲ್ಲ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಸರ್ಕಾರ ಶಾಶ್ವತ ಅಧಿಕಾರದಲ್ಲಿ ಇದ್ದೇವೆ ಎಂದು ತಿಳಿದುಕೊಂಡಿದ್ದಾರೆ. ಸಚಿವರ ವರ್ತನೆ ಹಾಗೂ ಹೇಳಿಕೆಗಳನ್ನು ನೋಡುವಾಗ ತುರ್ತು ಪರಿಸ್ಥಿತಿ ನೆನಪಾಗುತ್ತದೆ. ಪೊಲೀಸ್ ಠಾಣೆಗೆ ಬರಲು ಜನ ಭಯಪಡುತ್ತಿದ್ದಾರೆ. ವಿಪಕ್ಷಗಳ ಒಕ್ಕೂಟದ ಸಭೆಗೆ ಆಗಮಿಸಿದ ಅತಿಥಿಗಳನ್ನು ಸ್ವಾಗತ ಮಾಡುವ ಶಿಷ್ಟಾಚಾರದ ಬಗ್ಗೆ ಸರ್ಕಾರ ನಡೆದುಕೊಂಡ ರೀತಿ ಹಾಗೂ ಅದಕ್ಕೆ ಸ್ಪೀಕರ್ ಕೂಡಾ ಧ್ವನಿಗೂಡಿಸಿದ್ದಾರೆ ಎಂದು ಬೊಮ್ಮಾಯಿ ಕಿಡಿಕಾರಿದರು.
ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ: ವಿರೋಧ ಪಕ್ಷಗಳ ವಿರುದ್ಧ ಕಾಂಗ್ರೆಸ್ ಸರ್ಕಾರದ ಧಮನಕಾರಿ ಹಾಗೂ ಸರ್ವಾಧಿಕಾರಿ ನೀತಿಯ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಹೋರಾಟ ನಡೆಸುತ್ತೇವೆ. ನಾಳೆ ಕಲಾಪ ಬಹಿಷ್ಕರಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಉಗ್ರರಿಗೆ ಕುಮ್ಮಕ್ಕು ನೀಡುವಂತಿದೆ: ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾದವರನ್ನು ಉಗ್ರರು ಎಂದು ಕರೆಯಲು ಆಗಲ್ಲ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಉಗ್ರರ ಬಳಿ ಸಿಕ್ಕಿರುವ ಶಸ್ತ್ರಾಸ್ತ್ರ, ಅಂತಾರಾಷ್ಟ್ರೀಯ ಉಗ್ರರ ಜೊತೆಗೆ ಇರುವ ನಂಟನ್ನು ನೋಡಿದರೆ ಅವರು ಉಗ್ರರು ಎಂದು ಸ್ಪಷ್ಟವಾಗುತ್ತದೆ. ಆದರೆ ಗೃಹ ಸಚಿವರ ಹೇಳಿಕೆ ಅಂತಹ ಚಟುವಟಿಕೆಗಳನ್ನು ಮಾಡುವ ಶಕ್ತಿಗಳಿಗೆ ಬೆಂಬಲ ಕೊಟ್ಟಂತೆ ಆಗುತ್ತದೆ ಎಂದು ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದರು.
ಕಾಂಗ್ರೆಸ್-ಬರ ಒಂದೇ ನಾಣ್ಯದ ಎರಡು ಮುಖ: ಕಾಂಗ್ರೆಸ್ ಹಾಗೂ ಬರಗಾಲವು ಒಂದೇ ನಾಣ್ಯದ ಎರಡು ಮುಖಗಳು. ಕಾಂಗ್ರೆಸ್ ಅಧಿಕಾರದಲ್ಲಿ ಬಂದಾಗ ಬರಗಾಲ ಬರುತ್ತದೆ. ಕಾಂಗ್ರೆಸ್ ಶಾಪ ಇದ್ದಂತೆ. ಅದು ತೊಲಗುವವರೆಗೆ ಶಾಪ ಮುಕ್ತಿ ಆಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.
ವಿಪಕ್ಷ ನಾಯಕರ ಸ್ವಾಗತಕ್ಕೆ ಐಎಎಸ್ ಅಧಿಕಾರಿಗಳ ನಿಯುಕ್ತಿ ಬಗ್ಗೆ ರಾಜ್ಯಪಾಲರ ಗಮನಕ್ಕೆ ತರಲಾಗಿದೆ. ಸಭಾಧ್ಯಕ್ಷರು ಏಕಪಕ್ಷೀಯವಾಗಿ ವರ್ತನೆ ಮಾಡಿರುವುದನ್ನು ಅವರ ಗಮನಕ್ಕೆ ತಂದಿದ್ದೇವೆ. ಈವರೆಗೆ ಪೇಪರ್ ಹರಿದು ಹಾಕಿದ್ದಕ್ಕೆ ವಿಧಾನಸಭೆಯಲ್ಲಿ ಯಾವ ಶಾಸಕರನ್ನೂ ಅಮಾನತು ಮಾಡಿಲ್ಲ. ಈ ಹಿಂದೆ ವಿಧಾನಪರಿಷತ್ನಲ್ಲಿ ಉಪಸಭಾಪತಿಯವರನ್ನು ಕುರ್ಚಿಯಿಂದ ಎಳೆದು ಹಾಕಿದ್ದರು. ಹಾಗಾದರೆ ಅವರನ್ನು ವಜಾ ಮಾಡಬೇಕಿತ್ತು ಎಂದರು.
ರಾಜ್ಯಪಾಲರಿಗೆ ನೀಡಿದ ದೂರಿನಲ್ಲೇನಿದೆ?: ರಾಜ್ಯಪಾಲರಿಗೆ ಬಿಜೆಪಿ-ಜೆಡಿಎಸ್ ಪಕ್ಷಗಳಿಂದ ಜಂಟಿ ದೂರು ನೀಡಲಾಗಿದ್ದು, ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ತಿಳಿಸಲಾಗಿದೆ. ಅಧಿಕಾರಿ ವರ್ಗದ ದುರ್ಬಳಕೆ, ಆಡಳಿತ ಯಂತ್ರದ ದುರ್ಬಳಕೆ ಆಗಿದೆ. ಅಧಿಕಾರಿ ನಿಯೋಜನೆ ಮೂಲಕ ಶಿಷ್ಟಾಚಾರ ಉಲ್ಲಂಘನೆ ಆಗಿದೆ. ರಾಜ್ಯಪಾಲರು ಕೂಡಲೇ ಮಧ್ಯ ಪ್ರವೇಶಿಸಬೇಕು. ಸಿಎಂ ಅವರನ್ನು ಕರೆಸಿ ಸ್ಪಷ್ಟೀಕರಣ ಪಡೆಯಬೇಕು. ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಸಿಎಂ ಕಡೆಯಿಂದ ಸ್ಪಷ್ಟೀಕರಣ ಪಡೆಯಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಬಿಜೆಪಿ ಲೆಟರ್ ಹೆಡ್‌ನಲ್ಲಿ ಹೆಚ್ಡಿಕೆ ಸಹಿ: ಅಚ್ಚರಿ ಎಂದರೆ ರಾಜ್ಯಪಾಲರಿಗೆ ನೀಡಿದ ದೂರಿನ ಬಿಜೆಪಿ ಲೋಗೋ ಇರುವ ಲೆಟರ್ ಹೆಡ್‌ನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಕೂಡ ಸಹಿ ಹಾಕಿದ್ದಾರೆ. ರಾಜ್ಯಪಾಲರಿಗೆ ಕೇವಲ ಒಂದೇ ದೂರು ನೀಡಲಾಗಿದೆ. ಅದೇ ಪತ್ರಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ಶಾಸಕರು ಸಹಿ ಮಾಡಿದ್ದಾರೆ.
ಇದನ್ನೂ ಓದಿ: BJP protest: ಹತ್ತು ಶಾಸಕರ ಅಮಾನತು ಖಂಡಿಸಿ ಬಿಜೆಪಿ ಸದಸ್ಯರ ಪ್ರತಿಭಟನೆ