ಬೆಂಗಳೂರು: ನೂತನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಶುಭಕೋರಲು ಡಾಲರ್ಸ್ ಕಾಲೊನಿಯ ಧವಳಗಿರಿ ನಿವಾಸಕ್ಕೆ ನೂರಾರು ಕಾರ್ಯಕರ್ತರು ಬೆಳ್ಳಂಬೆಳಗ್ಗೆ ಆಗಮಿಸಿದ್ದಾರೆ.
ನಾಲ್ಕನೇ ಬಾರಿಗೆ ಸಿಎಂ ಆಗಿರುವ ಬಿಎಸ್ವೈಗೆ ಹೂವಿನ ಹಾರ, ಬೊಕ್ಕೆಗಳನ್ನು ನೀಡಿ ಶುಭಕೋರಲಾಗುತ್ತಿದೆ. ಮಗ ಬಿ.ವೈ. ವಿಜಯೇಂದ್ರ ಹಾಗೂ ಶಾಸಕ ರೇಣುಕಾಚಾರ್ಯ ಕೂಡಾ ಸಿಎಂ ಜೊತೆಗಿದ್ದಾರೆ. ಇಂದು ಯಡಿಯೂರಪ್ಪ ತಮ್ಮ ಹುಟ್ಟೂರಾದ ಮಂಡ್ಯ ಜಿಲ್ಲೆಯ ಬೂಕನಕೆರೆಗೆ ಬೆಳಗ್ಗೆ 10 ಗಂಟೆಗೆ ವಿಶೇಷ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಲಿದ್ದಾರೆ.
ಬೂಕನಕೆರೆ ಗವಿಮಠದ ಸಿದ್ದಲಿಂಗ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ನಂತರ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಭೇಟಿಯಾಗಿ ಮೇಲುಕೊಟೆಯಿಂದ ಬೆಂಗಳೂರಿಗೆ 2-20 ಕ್ಕೆ ಹಿಂತಿರುಗಲಿದ್ದಾರೆ.
ಇದಾದ ನಂತರ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಸಂಪುಟ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆ ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.