ಬೆಂಗಳೂರು: ಕರ್ನಾಟಕದ ಆರ್ಚ್ ಡಿಸೀಸ್ ಚರ್ಚ್ ಆರ್ಚ್ ಬಿಷಪ್ ರೆವರೆಂಡ್ ಡಾ. ಪೀಟರ್ ಮಚಾದೊ ಇತರ ಅನುಯಾಯಿಗಳು, ಫಾದರ್ಗಳೊಂದಿಗೆ ಇಂದು ರಾಜಧಾನಿಯ ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಿದರು.
ಭೇಟಿಯ ಒಂದು ಭಾಗವಾಗಿ, ಡಾ. ಮಚಾದೊ ಇಸ್ಕಾನ್ ದೇವಾಲಯದ ಶ್ರೀ ರಾಧಾ ಕೃಷ್ಣಚಂದ್ರರ ಆಶೀರ್ವಾದವನ್ನು ಪಡೆದರು. ಅಕ್ಷಯ ಪಾತ್ರೆ ಅಡುಗೆ ಮನೆಗೆ ಭೇಟಿ ನೀಡಿ ಪ್ರತಿದಿನ ಊಟ ತಯಾರಿಕೆಯಲ್ಲಿ ನಡೆಯುವ ಕಾರ್ಯವೈಖರಿ ವೀಕ್ಷಿಸಿದರು. ಡಾ.ಮಚಾದೊ ಮತ್ತವರ ತಂಡ ಬೆಂಗಳೂರಿನ ಇಸ್ಕಾನ್ ಅಧ್ಯಕ್ಷ ಮಧು ಪಂಡಿತ್ ದಾಸ್ ಮತ್ತು ಹಿರಿಯ ಉಪಾಧ್ಯಕ್ಷ ಚಂಚಲಪತಿ ದಾಸ್ ಅವರೊಂದಿಗೆ ಸಂಭಾಷಣೆ ನಡೆಸಿದರು.
ದೇವಾಲಯಕ್ಕೆ ಭೇಟಿ ನೀಡಿ ಇಸ್ಕಾನ್ ಮಾಡಿದ ಕಾರ್ಯಗಳನ್ನು ಮತ್ತು ಅದರ ಉಪಕ್ರಮವಾದ ಅಕ್ಷಯ ಪಾತ್ರ ಫೌಂಡೇಶನ್ ಅರ್ಥಮಾಡಿಕೊಂಡ ನಂತರ ಡಾ. ಮಚಾದೊ ಮಾತನ್ನಾಡಿ “ನಿಮ್ಮ ಸೇವೆ ಯಾವುದೇ ಧಾರ್ಮಿಕ ಪ್ರಚಾರಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ನಮ್ಮ ದೇಶದಲ್ಲಿ, ಯಾವುದೇ ಒಡಕು ಸೃಷ್ಟಿಸುವ ಬದಲು ಎಲ್ಲರನ್ನೂ ಒಂದುಗೂಡಿಸುವಂತಹ ದೊಡ್ಡ ಧಾರ್ಮಿಕ ಪರಂಪರೆಯನ್ನು ನಮ್ಮ ದೇಹ ಹೊಂದಿದೆ. ಪ್ರಾರ್ಥನೆಯ ತುಟಿಗಳಿಗಿಂತ ಸಹಾಯ ಮಾಡುವ ಕೈಗಳು ಉತ್ತಮ' ಎಂದು ಮದರ್ ತೆರೇಸಾ ಹೇಳಿದ್ದನ್ನು ಇಸ್ಕಾನ್ ಬೆಂಗಳೂರು ಕಾರ್ಯರೂಪಕ್ಕೆ ತಂದಿದೆ. ನಮ್ಮ ರಾಷ್ಟ್ರದ ಹೊಸ ಪೀಳಿಗೆಯನ್ನು ಉದ್ಧರಿಸಲು ಇಸ್ಕಾನ್ ಅದ್ಭುತ ಕೆಲಸ ಮಾಡುತ್ತಿದೆ. ಮಕ್ಕಳಿಗೆ ಆಹಾರ ನೀಡುವ ಮೂಲಕ , ಉತ್ತಮವಾದ ಅಧ್ಯಯನಕ್ಕೆ ಪ್ರೇರೇಪಿಸುವ ಮೂಲಕ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತಿದೆ. ಅವರ ಈ ಪ್ರಯತ್ನದಲ್ಲಿ ಎಲ್ಲಾ ಸ್ವಯಂಸೇವಕರಿಗೂ ದೇವರು ಆಶೀರ್ವಾದವನ್ನು ನೀಡಲಿ ಎಂದು ನಾನು ಬಯಸುತ್ತೇನೆ. "ಎಂದು ಸಭೆಯಲ್ಲಿ ತಿಳಿಸಿದರು.