ಬೆಂಗಳೂರು: ಇಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ನಡೆಯಲಿದೆ. ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ಸಾರ್ವಜನಿಕರಿಗೆ ಪಂದ್ಯ ವೀಕ್ಷಿಸಲು ದೊಡ್ಡ ಪರದೆಯ ವ್ಯವಸ್ಥೆ ಕಲ್ಪಿಸಲು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸುತ್ತೋಲೆ ಹೊರಡಿಸಿದೆ.
ಪಂದ್ಯದ ನೇರಪ್ರಸಾರವನ್ನು ಎಲ್ಲಾ ಜಿಲ್ಲೆಗಳ ಜಿಲ್ಲಾ ಕ್ರೀಡಾಂಗಣಗಳಲ್ಲಿ ಸಾರ್ವಜನಿಕರು, ಕ್ರೀಡಾಪಟುಗಳು ದೊಡ್ಡ ಪರದೆಯಲ್ಲಿ ವೀಕ್ಷಿಸಲು ಅನುವಾಗುವಂತೆ ವ್ಯವಸ್ಥೆ ಕಲ್ಪಿಸಬೇಕು. ಈ ಕುರಿತು ಅಗತ್ಯ ಪ್ರಚಾರ ಕೈಗೊಂಡು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಂದ್ಯ ವೀಕ್ಷಿಸುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದೆ. ಅಲ್ಲದೇ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆಯೂ ತಿಳಿಸಲಾಗಿದೆ.
ಶುಭ ಹಾರೈಕೆ: ಸಿಎಂ ಸಿದ್ದರಾಮಯ್ಯ ಭಾರತ ತಂಡಕ್ಕೆ ಶುಭ ಹಾರೈಸಿದ್ದಾರೆ. ಭಾರತ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಫೈನಲ್ ತಲುಪಿದೆ. ವಿರಾಟ್ ಕೊಹ್ಲಿ ಅವರಿನ್ನೂ ಹೆಚ್ಚು ಕಾಲ ಆಡಲಿ ಎಂದು ಆಶಿಸಿದರು. ಭಾರತೀಯರ ಗೆಲುವನ್ನು ಸಂಭ್ರಮಿಸಲು ನಾನೂ ಎಲ್ಲರಂತೆ ಕಾತರನಾಗಿದ್ದೇನೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ನಮ್ಮದು ಒಂದು ಪರಿಪೂರ್ಣ ತಂಡವಾಗಿದು. ಈ ಬಾರಿಯ ವಿಶ್ವಕಪ್ ಭಾರತದ ಮಡಿಲು ಸೇರುವುದು ನಿಶ್ಚಿತ ಎಂದರು.
ಭಾರತ ತಂಡದ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ವಿಶ್ವಕಪ್ ಗೆಲ್ಲುವ ವಿಶ್ವಾಸವಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ತಂಡ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಇತಿಹಾಸ ಮರುಕಳಿಸಲಿದೆ. ರಾಜ್ಯ ಸರ್ಕಾರದ ಪರವಾಗಿ ಶುಭ ಕೋರುತ್ತೇನೆ ಎಂದರು.
ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ, ವಿಶ್ವಕಪ್ ಕ್ರಿಕೆಟ್‌ನಲ್ಲಿ ಇಡೀ ವಿಶ್ವವೇ ನಮ್ಮ ಹೆಮ್ಮೆಯ ದೇಶದ ಕಡೆಗೆ ತಿರುಗಿ ನೋಡುವಂತೆ ಭಾರತದ ಕ್ರಿಕೆಟಿಗರು ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ನಾಳೆ ಕ್ರಿಕೆಟ್ ವಿಶ್ವಕಪ್ ಫೈನಲ್: ಟೀಂ ಇಂಡಿಯಾಗೆ ಶುಭ ಕೋರಿದ ಶಿವಮೊಗ್ಗದ ಕ್ರಿಕೆಟ್ ಅಭಿಮಾನಿಗಳು