ಬೆಂಗಳೂರು: ಇಂದು ಕೇಂದ್ರ ವಿತ್ತ ಸಚಿವರು ಕೇಂದ್ರದ ವಿಶೇಷ ಪ್ಯಾಕೇಜ್ ಘೋಷಣೆಗಳನ್ನ ಮಾಡಿದ್ದು, ನನ್ನ ಇಲಾಖೆಯ ವ್ಯಾಪ್ತಿಗೆ ಬರುವ ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಕೇಂದ್ರ ರಿಲೀಫ್ ಕೊಟ್ಟಿದೆ. ಕೇಂದ್ರದ ಆರ್ಥಿಕ ನೆರವಿನಿಂದ ಎಂಎಸ್ಎಂಇ ವಲಯಕ್ಕೆ ಚೈತನ್ಯ ಬರಲಿದ್ದು, ಕೇಂದ್ರದ ಆರ್ಥಿಕ ನೆರವನ್ನು ಸ್ವಾಗತಿಸುತ್ತೇನೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಕ್ರೆಸೆಂಟ್ ರಸ್ತೆಯಲ್ಲಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಣ್ಣ, ಮಧ್ಯಮ ಕೈಗಾರಿಕೆಗಳು ಉಳಿದು ಬದುಕಲು ಪ್ರಧಾನಿ ಮೋದಿ ಪ್ರಕಟಿಸಿರುವ ಪ್ಯಾಕೇಜ್ ಪೂರಕವಾಗಿದೆ. ಎಂಎಸ್ಎಂಇ ವಲಯಕ್ಕೆ 3 ಲಕ್ಷ ಕೋಟಿ ಸಾಲದ ನೆರವು ಕೊಟ್ಟಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ದೇಶದ 45 ಲಕ್ಷ ಎಂಎಸ್ಎಂಇ ವಲಯಗಳಿಗೆ ಅನುಕೂಲವಾಗಲಿದೆ ಎಂದರು.
ಅ. 31ರವರೆಗೆ ಎಂಎಸ್ಎಂಇ ಕೈಗಾರಿಕೆಗಳು ಸಾಲ ಪಡೆಯಬಹುದು. ಈ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ ನೀಡಲಿದೆ. ಇದೇ ಮೊದಲ ಬಾರಿಗೆ ಕೈಗಾರಿಕಾ ಸಾಲಕ್ಕೆ ಕೇಂದ್ರ ಜವಾಬ್ದಾರಿ ವಹಿಸಿಕೊಂಡಿದೆ. 200 ಕೋಟಿವರೆಗೆ ಗ್ಲೋಬಲ್ ಟೆಂಡರ್ ರದ್ದು ಮಾಡಿದ್ದು, ಇದರಿಂದ ದೇಶೀಯ ಕಂಪನಿಗಳಿಗೆ ಅನುಕೂಲವಾಗಲಿದೆ ಎಂದರು.
ನಾವು ನಿರೀಕ್ಷೆ ಮಾಡದ ದೊಡ್ಡ ಪ್ರಮಾಣದಲ್ಲಿ ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಿಸಿದೆ. ಕೊರೊನಾ ವಿರುದ್ಧ ಕೇಂದ್ರದ ಹೋರಾಟ ಪರಿಣಾಮಕಾರಿ ಆಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಎಲ್ಲಾ ವಲಯಗಳಿಗೂ ನಷ್ಟವಾಗಿದೆ. ಕೇಂದ್ರದಿಂದ ಈಗಾಗಲೇ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆಯಾಗಿದೆ. ಈ ಪ್ರಮಾಣದ ಪ್ಯಾಕೇಜ್ ದೇಶದ ಇತಿಹಾಸದಲ್ಲೇ ಅತೀ ದೊಡ್ಡದು ಎಂದರು.
ಚೀನಾದಿಂದ ಹೊರ ಬರುವ ಕಂಪನಿಗಳಿಗೆ ಸ್ವಾಗತ:
ಇತ್ತೀಚಿನ ಬೆಳವಣಿಗೆ ನೋಡಿದಾಗ ಚೀನಾ ವಿರುದ್ಧ ಆಕ್ರೋಶ ಮಡುಗಟ್ಟಿದೆ. ಪೂರ್ವ ಮತ್ತು ಯುರೋಪಿಯನ್ ದೇಶಗಳು ಚೀನಾದ ಮೇಲೆ ಸಿಟ್ಟಾಗಿವೆ. ಚೀನಾದಿಂದ ಹೊರ ಬರುವ ಕಂಪನಿಗಳಿಗೆ ಆ ದೇಶಗಳು ನೆರವು ಘೋಷಿಸಿವೆ. ನಮ್ಮ ರಾಜ್ಯದಲ್ಲೂ ಈ ಪದ್ಧತಿ ಅನುಸರಿಸುತ್ತಿದ್ದೇವೆ. ಚೀನಾದಿಂದ ಹೊರ ಬರುವ ಕಂಪನಿಗಳನ್ನು ಸ್ವಾಗತಿಸಲು ನಮ್ಮ ರಾಜ್ಯವೂ ಮುಂದಾಗಿದೆ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕೈಗಾರಿಕೋದ್ಯಮಿಗಳ ಜೊತೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಚೀನಾದಿಂದ ಹೊರಗೆ ಬರುವ ಕಂಪನಿಗಳನ್ನು ಸೆಳೆಯಲು ಟಾಸ್ಕ್ ಫೋರ್ಸ್ ರಚಿಸಲಾಗಿದೆ. ನಮ್ಮ ರಾಜ್ಯ, ನಮ್ಮ ದೇಶದ ಹಲವು ಕೈಗಾರಿಕೋದ್ಯಮಿಗಳು ಚೀನಾದಲ್ಲಿ ಉದ್ಯಮ ನಡೆಸುತ್ತಿದ್ದು, ಅಂಥವರಿಗೂ ನಮ್ಮಲ್ಲೇ ಕೈಗಾರಿಕೆ ಸ್ಥಾಪಿಸಲು ಪೂರಕ ವಾತಾವರಣ ರೂಪಿಸಿಕೊಡುತ್ತೇವೆ ಎಂದರು.
ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದೆ. ಈ ಕಾಯ್ದೆಯಿಂದ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ. ಈ ಕಾಯ್ದೆಯನ್ನು ಪ್ರತಿಪಕ್ಷಗಳು ವಿರೋಧಿಸುವ ಅಗತ್ಯವಿಲ್ಲ. ಕಾಯ್ದೆಯಿಂದ ರೈತರಿಗೆ ಸಮಸ್ಯೆ ಆಗಲ್ಲ. ಅನಾವಶ್ಯಕ ಟೀಕೆಯನ್ನು ಪ್ರತಿಪಕ್ಷಗಳು ಕೈಬಿಡಲಿ ಎಂದು ಮನವಿ ಮಾಡಿದರು.
ವಲಸೆ ಕಾರ್ಮಿಕರ ವಾಪಸ್ ಎಲ್ಲಾ ರಾಜ್ಯಕ್ಕೂ ತೊಂದರೆ:
ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಕೆ ಬಳಿಕ ಕೈಗಾರಿಕೆಗಳು ನಿಧಾನಗತಿಯಲ್ಲಿ ಆರಂಭವಾಗಿವೆ. ಸಡಿಲಿಕೆ ಇದ್ದು ಕೈಗಾರಿಕೆ ಆರಂಭಕ್ಕೆ ಅನುಮತಿ ನೀಡಿದ್ದರೂ ಶೇ. 25ರಷ್ಟು ಮಾತ್ರ ಕೈಗಾರಿಕಾ ವಲಯ ಕಾರ್ಯಾರಂಭ ಮಾಡಿದೆ. ಇದಕ್ಕೆ ಪೂರಕವಾಗಿ ಮೂಲ ಸೌಲಭ್ಯ ಕೊರತೆ, ಕಾರ್ಮಿಕರ ಕೊರತೆ, ತತ್‌ಕ್ಷಣದ ಅಗತ್ಯ ಸಾಮಾಗ್ರಿಗಳ ಪೂರೈಕೆ ಕೊರತೆ ಕಾರಣ ಕೇಂದ್ರದ ವಿಶೇಷ ಪ್ಯಾಕೇಜ್ ಬಳಿಕ ರಾಜ್ಯದ ಕೈಗಾರಿಕಾ ವಲಯ ಪುನಶ್ಚೇತನ ಕಾಣಬಹುದು.
ವಲಸೆ ಕಾರ್ಮಿಕರ ಕೊರತೆ ಮುಂದಿನ ದಿನಗಳಲ್ಲೂ ಮುಂದುವರೆಯುವ ಸಾಧ್ಯತೆ ಇದೆ. ವಲಸೆ ಕಾರ್ಮಿಕರು ಹಿಂದಿರುಗಿದ್ದರಿಂದ ರಾಜ್ಯದ ಕೈಗಾರಿಕಾ ವಲಯಕ್ಕೆ, ನಿರ್ಮಾಣ ವಲಕ್ಕೆ ಸಂಕಷ್ಟ ತಂದಿದೆ. ಇದು ಎಲ್ಲಾ ರಾಜ್ಯಗಳಲ್ಲಿಯೂ ಆಗಿದೆ. ಒಂದೊಂದು ರಾಜ್ಯ ಒಂದೊಂದು ರಾಜ್ಯದ ಕಾರ್ಮಿಕರನ್ನು ಕೆಲ ಕ್ಷೇತ್ರಗಳಲ್ಲಿ ಅವಲಂಭಿಸಿವೆ ಎಂದರು.