ಬೆಂಗಳೂರು: ಬೀದರ್ ಶಾಲಾ ಶಿಕ್ಷಕಿಯರ ವಿರುದ್ಧದ ದೇಶದ್ರೋಹದ ಪ್ರಕರಣ ಇಂದು ಮೇಲ್ಮನೆಯಲ್ಲಿ ಕೋಲಾಹಲ ಎಬ್ಬಿಸಿತು. ಶಿಕ್ಷಕರ ಮೇಲೆ ದಾಖಲಾಗಿರುವ ಮೊಕದ್ದಮೆ ಕೈಬಿಡುವಂತೆ ಒತ್ತಾಯಿಸಿ ಜೆಡಿಎಸ್ನ ಶ್ರೀಕಂಠೇಗೌಡ ಒತ್ತಾಯಿಸಿದರು.
ಶಿಕ್ಷಕರ ಮೇಲೆ ಅನಗತ್ಯವಾಗಿ ಕೇಸ್ ಹಾಕಲಾಗಿದೆ. ಪಾಠ ಮಾಡುವ ಗುರುಗಳನ್ನು ಜೈಲಿಗೆ ಕಳಿಸಲಾಗುತ್ತಿದೆ. ಕೂಡಲೇ ಸರ್ಕಾರ ಶಿಕ್ಷಕರ ಮೇಲಿನ ಕೇಸ್ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಜೆಡಿಎಸ್ ಸದಸ್ಯರೆಲ್ಲರೂ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಕೈ ಸದಸ್ಯರೂ ಬಳಿಕ ಸದನದ ಬಾವಿಗಿಳಿದು ಶಿಕ್ಷಕರ ಮೇಲಿನ ಕೇಸ್ ತೆಗೆಯುವಂತೆ ಆಗ್ರಹಿಸಿದರು. ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷದ ಮಧ್ಯೆ ಮಾತಿನ ಚಕಮಕಿ ನಡೆಯಿತು.
ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡುತ್ತಾ, ನನ್ನದೂ ಸೇರಿದಂತೆ ಬಹುತೇಕರದ್ದೂ ಇಲ್ಲಿ ಶಿಕ್ಷಣ ಸಂಸ್ಥೆಗಳಿವೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ನಡೆಯುತ್ತವೆ. ನಾವು ಮೂಲ ಸೌಕರ್ಯ ಕೊಡುತ್ತೇವೆ. ಅಲ್ಲಿ ಯಾವುದಾದರೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ. ಆಗ ನಮ್ಮ ಮೇಲೂ ಕೇಸ್ ಹಾಕಲಾಗುತ್ತದೆ. ಪ್ರಭಾಕರ್ ಕೋರೆ ಅವರದ್ದೂ ಶಿಕ್ಷಣ ಸಂಸ್ಥೆ ಇವೆ. ಕೆಎಲ್ಇ ಕ್ಯಾಂಪಸ್ ನಲ್ಲೇ ಸಿಎಎ ವಿರುದ್ಧ ಹೋರಾಟ ನಡೆದಿದೆ. ಹಾಗಾದ್ರೆ ಪ್ರಭಾಕರ್ ಕೋರೆ ಮೇಲೆ ಕೇಸ್ ಹಾಕ್ತಿರಾ? ಎಂದು ಪ್ರಶ್ನಿಸಿದರು. ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮಧ್ಯಾಹ್ನ ಎರಡು ಗಂಟೆವರೆಗೆ ಕಲಾಪವನ್ನು ಮುಂದೂಡಿದರು.