ಬೆಂಗಳೂರು: ರಾಜ್ಯ ಸರ್ಕಾರ ವಿಧಾನಸೌಧವನ್ನು ವ್ಯಾಪಾರ ಸೌಧವಾಗಿಸಿಕೊಂಡಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ದೂರಿದರು. ಮಾಧ್ಯಮಗೋಷ್ಠಿಯಲ್ಲಿ ಪಿಎಸ್ಐ ಹಗರಣ ವಿಚಾರವಾಗಿ ಮಾತನಾಡಿ, ಪಿಎಸ್ಐ ಹಗರಣದಲ್ಲಿ 15 ಲಕ್ಷ ಪಡೆದಿರುವ ಕುರಿತು ಆಡಿಯೋದಲ್ಲಿ ಇರುವುದು ನನ್ನದೇ ಧ್ವನಿ ಎಂದು ಕನಕಗಿರಿ ಬಿಜೆಪಿ ಶಾಸಕ ಬಸವರಾಜ್ ದಡೇಸಗೂರ ಒಪ್ಪಿಕೊಂಡಿದ್ದಾರೆ. ಜೊತೆಗೆ ಅವರು ಮಧ್ಯಸ್ಥಿಕೆ ವಹಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಅವರು ಮಾತು ಹೇಗಿದೆ ಎಂದರೆ ನಾನು ಮರ್ಡರ್ ಮಾಡಿಲ್ಲ ಹಾಫ್ ಮರ್ಡರ್ ಮಾತ್ರ ಮಾಡಿದ್ದೇನೆ ಎಂಬಂತಿದೆ ಎಂದರು.
ಬಿಜೆಪಿ ಸರ್ಕಾರ ಈ ಹಗರಣವನ್ನು ಕೇವಲ ಕೆಲ ಪರೀಕ್ಷಾ ಕೇಂದ್ರಕ್ಕೆ ಮಾತ್ರ ಸೀಮಿತಗೊಳಿಸುತ್ತಿದೆ ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ. ಈ ಹಗರಣದಲ್ಲಿ ಬಂಧಿತರಾಗಿರುವ ಐಪಿಎಸ್ ಅಧಿಕಾರಿ ನ್ಯಾಯಾಂಗ ತನಿಖೆಯಲ್ಲಿ ಎಲ್ಲ ಸತ್ಯ ಹೇಳುವುದಾಗಿ ಹೇಳಿದ್ದಾರೆ. ಈ ಪ್ರಕರಣ ಸರಿಯಾಗಿ ತನಿಖೆ ಆದರೆ ವಿಧಾನಸೌಧ ವ್ಯಾಪಾರ ಸೌಧ ಆಗಲಿದೆ ಎಂದು ಸಾಬೀತುಪಡಿಸಬಹುದು ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಶಾಸಕರು ಈ ಹಗರಣದಲ್ಲಿ ಮಧ್ಯಸ್ಥಿಕೆ ವಹಿಸಿದ್ದರೆ ಯಾರ ಪರವಾಗಿ ಮಧ್ಯಸ್ಥಿಕೆ ವಹಿಸಿದ್ದರು? ಅವರ ಹೇಳಿಕೆ ಮೂಲಕ ಇಡೀ ಸರ್ಕಾರ ಭ್ರಷ್ಟ ಎಂದು ಸಾಬೀತಾಗುತ್ತದೆ. ಪ್ರಕರಣ ನ್ಯಾಯಾಂಗ ತನಿಖೆಗೆ ನೀಡಲು ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕು? ಐಪಿಎಸ್ ಅಧಿಕಾರಿ, ಪೊಲೀಸ್ ಅಧಿಕಾರಿಗಳು ಬಂಧನವಾಗಿದ್ದು, ಈಗ ಬಿಜೆಪಿ ಶಾಸಕರ ಆಡಿಯೋ ಬಹಿರಂಗವಾಗಿದೆ. ನಾವೇ ಮಧ್ಯಸ್ಥಿಕೆ ವಹಿಸಿದ್ದೇವೆ ಎಂಬ ವಿಚಾರ ಹೇಳಿದ ಮೇಲೂ ಈ ಕುಂಭಕರ್ಣ ಸರ್ಕಾರ ನಿದ್ರಾವಸ್ಥೆಯಿಂದ ಎಚ್ಚರವಾಗುವುದು ಯಾವಾಗ? ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ನ್ಯಾಯಾಂಗ ತನಿಖೆಗೆ ವಹಿಸಲು ಹಿಂಜರಿಯುತ್ತಿರುವುದೇಕೆ? ಒಂದು ವಿಶೇಷ ತನಿಖಾ ತಂಡ ರಚಿಸಿ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ಮಾಡಿಸಿ. ಮಾತೆತ್ತಿದರೆ ಕಾಂಗ್ರೆಸ್ ಕಾಲದ ಹಗರಣ ತೆಗೆಯುತ್ತೇವೆ ಎಂದು ಹೇಳುತ್ತೀರಿ. ದಯಮಾಡಿ ತೆಗೆಯಿರಿ ಸ್ವಾಮಿ. ಯಾಕೆ ತೆಗೆಯುತ್ತಿಲ್ಲ? ಸರ್ಕಾರಕ್ಕೆ ಹೇಳಲು ಒಂದೇ ಒಂದು ಸಾಧನೆ ಇಲ್ಲ. ಈ ಸರ್ಕಾರ ಭ್ರಷ್ಟೋತ್ಸವ ಮಾಡುತ್ತಿದ್ದು, ಜನೋತ್ಸವ ಮಾಡಲು ಸಾಧ್ಯವಾಗುತ್ತಿಲ್ಲ. ಈ ಸರ್ಕಾರದ ಜನೋತ್ಯವ ಎರಡು ಮೂರು ಬಾರಿ ಮುಂದೂಡಲ್ಪಟ್ಟಿದ್ದು ಯಾಕೆ? ಜನರ ಆಕ್ರೋಶದಿಂದಲೇ ಹೊರತು, ಬೇರೆ ಕಾರಣ ಇಲ್ಲ ಎಂದರು.
ದೇಶದ ಜನರ ಸಂಕಷ್ಟ ನಿವಾರಣೆಗೆ ಭಾರತ ಜೋಡೋ ಯಾತ್ರೆ: ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂಸದ ಗೌರವ್ ಗೊಗೋಯ್, ಇವತ್ತು ದೇಶದ ಜನ ಸಂಕಷ್ಟಕ್ಕೊಳಗಾಗಿದ್ದಾರೆ. ಭಾರತ್ ಜೊಡೋ ಯಾತ್ರೆ ಹಮ್ಮಿಕೊಂಡಿದ್ದೇವೆ. ರಾಹುಲ್ ಗಾಂಧಿ ಅವರು ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ದೇಶದ ಜನರಿಗೆ ಧ್ವನಿಯಾಗಿ ಭಾರತ ಐಕ್ಯತಾ ಯಾತ್ರೆ ಹಮ್ಮಿಕೊಳ್ಳುವ ಬಗ್ಗೆ ಕುರಿತು ಮಾತನಾಡಿದ್ದಾರೆ. ಸದ್ಯ ದೇಶದ ಜನ ಆತಂಕ ಹಾಗೂ ಭಯದಲ್ಲಿ ಬದುಕುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳ ಶಿಕ್ಷಣ ಭವಿಷ್ಯದ ಬಗ್ಗೆ ಚಿಂತಿತರಾದರೆ, ಯುವಕರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಬೇರೆ ದೇಶಗಳನ್ನು ಅರಸುತ್ತಿದ್ದಾರೆ. ಸಮಾಜದ ವಿವಿಧ ವರ್ಗಗಳ ನಡುವಣ ಸಂಬಂಧವನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾಶ ಮಾಡಿದೆ ಎಂದು ದೂರಿದರು.
ಭಾರತ ಐಕ್ಯತಾ ಯಾತ್ರೆ ಮೂಲಕ ಜನರಿಗೆ ತಮ್ಮ ನೋವು, ಆಕ್ರೋಶಗಳನ್ನು ಹೇಳಿಕೊಂಡು, ಭವಿಷ್ಯದ ಬಗ್ಗೆ ಆಲೋಚಿಸಲು ವೇದಿಕೆ ಕಲ್ಪಿಸಲಾಗುವುದು. ಆ ಮೂಲಕ ಧ್ವನಿ ಎತ್ತಲು ಜನ ಹೆದರಬಾರದು ಎಂಬ ಕಾರಣಕ್ಕೆ ರಾಹುಲ್ ಗಾಂಧಿ ಅವರು ಈ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ. ರಾಷ್ಟ್ರವ್ಯಾಪಿ ಪಾದಯಾತ್ರೆ ಮಾಡುವ ಮೂಲಕ ಬಡವ, ಮಧ್ಯಮ ವರ್ಗದವರು, ಹಿರಿಯರು, ಯುವಕರು, ಮಹಿಳೆಯರು, ಎಲ್ಲಾ ಧರ್ಮ, ಜಾತಿ ಸೇರಿದಂತೆ ಎಲ್ಲರ ಮಧ್ಯೆ ಸಾಮರಸ್ಯ ಸಾಧಿಸಿ, ಸುಭದ್ರ ಭಾರತ ನಿರ್ಮಾಣಕ್ಕೆ ರಾಹುಲ್ ಗಾಂಧಿ ಅವರು ಪಣ ತೊಟ್ಟಿದ್ದಾರೆ ಎಂದರು.
ತಮಿಳುನಾಡಿನಲ್ಲಿ ಭಾರತ ಜೋಡೋ ಯಾತ್ರೆ ಆರಂಭ: ಭಾರತ್ ಜೊಡೋ ಮಾಧ್ಯಮ ಸಂಚಾಲಕಿ ಡಾಲಿ ಶರ್ಮಾ ಮಾತನಾಡಿ, ಭಾರತ ಜೋಡೋ ಯಾತ್ರೆಯು ಸೆ.7 ರಂದು ತಮಿಳುನಾಡಿನಲ್ಲಿ ಆರಂಭವಾಗಲಿದೆ. ಸೆ.7ರಂದು ಬೆಳಗ್ಗೆ 7 ಗಂಟೆಗೆ ರಾಹುಲ್ ಗಾಂಧಿ ಅವರು ಶ್ರೀಪೆರಂಬದೂರಿನಲ್ಲಿ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ನಮನ ಸಲ್ಲಿಸಿ ಮಧ್ಯಾಹ್ನ ಮಧ್ಯಾಹ್ನ 3-4 ಗಂಟೆಗೆ ತ್ರಿವೆಲ್ಲೂರಿನಲ್ಲಿ ಇರುವ ವಿವೇಕಾನಂದರು ಹಾಗೂ ಕಾಮರಾಜ್ ಅವರ ಸ್ಮಾರಕಕ್ಕೆ ನಮನ ಸಲ್ಲಿಸುತ್ತಾರೆ. ನಂತರ ಮಹಾತ್ಮಾ ಗಾಂಧಿ ಮಂಟಪದಲ್ಲಿ ತ್ರಿವರ್ಣ ಧ್ವಜ ಹಸ್ತಾಂತರ ಕಾರ್ಯಕ್ರಮ ನಡೆಸಲಾಗುವುದು. ಅಲ್ಲಿಂದ ರಾಹುಲ್ ಗಾಂಧಿ ಅವರು ಬೀಚ್ ರಸ್ತೆವರೆಗೂ ಮೆರವಣಿಗೆಯಲ್ಲಿ ಸಾಗಿ ಬಳಿಕ ಸಾರ್ವಜನಿಕ ಸಭೆ ಮಾಡಲಾಗುವುದು. ಆ ಮೂಲಕ ಭಾರತ ಜೋಡೋ ಪಾದಯಾತ್ರೆಗೆ ಅಧಿಕೃತ ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದರು.
ಸೆ.8ರಂದು ಬೆಳಗ್ಗೆ 7 ಗಂಟೆಗೆ ಕನ್ಯಾಕುಮಾರಿಯ ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಪಾಲಿಟೆಕ್ನಿಕ್ ಮೈದಾನದಿಂದ ಪಾದಯಾತ್ರೆ ಆರಂಭವಾಗಲಿದೆ. ಈ ಸಮಯದಲ್ಲಿ ತಮಿಳುನಾಡು ರಾಜ್ಯದ ಕಾಂಗ್ರೆಸ್ ನಾಯಕರು ಹಾಗೂ ಇತರೆ ರಾಜ್ಯಗಳ ಕೆಲ ನಾಯಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.