ಬೆಂಗಳೂರು: ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆಯಲಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂದು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಹೊತ್ತಿರುವ ರಣದೀಪ್ ಸುರ್ಜೇವಾಲ ಅವರು ಆಗಮಿಸಿ ಭಾರತ ಐಕ್ಯತಾ ಯಾತ್ರೆಯ ಸಿದ್ಧತೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಈ ಯಾತ್ರೆ ಪ್ರಮುಖ ಐದು ವಿಚಾರಗಳನ್ನು ಹೊಂದಿದ್ದು, ಎಲ್ಲ ಪ್ರಮುಖ ನಾಯಕರಿಗೆ ಜವಾಬ್ದಾರಿ ನೀಡಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಕರ್ನಾಟಕದಲ್ಲಿ ಸೆ.30ರಿಂದ ಭಾರತ್ ಜೋಡೋ: ರಾಜ್ಯದಲ್ಲಿ ಈ ಯಾತ್ರೆ ಸೆ.30 ರಂದು ಬೆಳಗ್ಗೆ 9 ಗಂಟೆಗೆ ಗುಂಡ್ಲುಪೇಟೆಯಿಂದ ಆರಂಭವಾಗಲಿದೆ. ಅ. 2 ರಂದು ಬದನವಾಳು ಗ್ರಾಮದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ದಸರಾ ಹಬ್ಬದ ಪ್ರಯುಕ್ತ 2 ದಿನಗಳ ಕಾಲ ಯಾತ್ರೆಗೆ ಬಿಡುವು ನೀಡಲಾಗುವುದು.
ಬಳ್ಳಾರಿಯಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ. ರಾಹುಲ್ ಗಾಂಧಿ ಅವರು ಯುವಕರು, ಮಹಿಳೆಯರು, ರೈತರು, ನಾಗರಿಕ ಸಮುದಾಯಗಳು, ವಿದ್ಯಾರ್ಥಿಗಳು, ಬುಡಕಟ್ಟು ಜನರ ಜೊತೆ ಒಂದೊಂದು ದಿನ ಮಾತುಕತೆ ನಡೆಸಲಿದ್ದಾರೆ. ಪ್ರತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ, ಪಕ್ಷದ ಘಟಕಗಳು, ಪರಾಜಿತ ಅಭ್ಯರ್ಥಿಗಳು ಜನರನ್ನು ಕರೆ ತಂದ ದಿನ ರಾಹುಲ್ ಗಾಂಧಿ ಅವರ ಜೊತೆ ಹೆಜ್ಜೆ ಹಾಕಲು ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.
(ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಪುಟ್ಟ ಬಾಲಕಿ: ಚಪ್ಪಲಿ ಧರಿಸಲು ನೆರವಾದ ರಾಹುಲ್)
ನಾಗರಿಕ ಸಮಾಜದ ಗಣ್ಯರು, ಕಲಾವಿದರು, ಕೈಗಾರಿಕೋದ್ಯಮಿಗಳು, ಚಿಂತಕರು ಸೇರಿದಂತೆ ಪ್ರಮುಖರಿಗೆ ಅವಕಾಶ ಮಾಡಿಕೊಡಲಾಗುವುದು. ಈ ಯಾತ್ರೆ ಮಾರ್ಗದಲ್ಲಿ ಬರುವ ಅತಿ ದೊಡ್ಡ ನಗರ ಮೈಸೂರು ಆಗಿದ್ದು, ಮೈಸೂರು ಜನರು ಬೆಳಗ್ಗೆ 7 ಗಂಟೆಗೆ ರಾಹುಲ್ ಗಾಂಧಿ ಜೊತೆಗೆ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ರಾಹುಲ್ ಗಾಂಧಿಯವರು ಪಕ್ಷದ ಅಧ್ಯಕ್ಷರಾಗಿ ಮುಂದಾಳತ್ವ ವಹಿಸಬೇಕು ಎಂದು ನಮ್ಮ ರಾಜ್ಯದ ಎಲ್ಲ ನಾಯಕರ ಒತ್ತಾಸೆ. ಆದರೆ, ಅವರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕು ಎಂದು ಎಐಸಿಸಿ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಾತನಾಡಿ, ಇಂದು ಭಾರತ ಐಕ್ಯತಾ ಯಾತ್ರೆಯ ಸಿದ್ಧತಾ ಪರಿಶೀಲನಾ ಸಭೆ ಮಾಡಿದ್ದೇವೆ. ಪ್ರದೇಶ ಕಾಂಗ್ರೆಸ್ ಹಾಗೂ ರಾಜ್ಯ ನಾಯಕರು ಮಾಡಿರುವ ಎಲ್ಲಾ ಸಿದ್ಧತೆಗಳು ಎಐಸಿಸಿಗೆ ತೃಪ್ತಿ ತಂದಿದೆ. ನಮ್ಮ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲ ಅವರು ನಿತ್ಯ ತಯಾರಿ ಕುರಿತು ಪರಿಶೀಲನೆ ನಡೆಸುತ್ತಿದ್ದು, ರಾಜ್ಯದಲ್ಲಿನ ಯಾತ್ರೆ ಅತ್ಯಂತ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ಇದೆ.
ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ಯಾತ್ರೆಗೆ ತಮಿಳುನಾಡು ಹಾಗೂ ಕೇರಳದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ಲಭ್ಯವಾಗಿದೆ. ನಮ್ಮ ನಿರೀಕ್ಷೆ ಮೀರಿ ಲಕ್ಷಾಂತರ ಜನ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ರಾಹುಲ್ ನಿತ್ಯ 25 ಕಿಮೀ ಪಾದಯಾತ್ರೆ: ರಾಹುಲ್ ಗಾಂಧಿ ಮುಂದಾಳತ್ವ ವಹಿಸಿ ನಿತ್ಯ 25 ಕಿ.ಮೀ ಸರಾಸರಿಯಲ್ಲಿ 150 ದಿನ ಪಾದಯಾತ್ರೆ ಮಾಡುತ್ತಿದ್ದಾರೆ. ಯಾವ ನಾಯಕ ಇಂತಹ ಪಾದಯಾತ್ರೆ ಮಾಡಲು ಸಾಧ್ಯ? ನಿರುದ್ಯೋಗ, ಬೆಲೆ ಏರಿಕೆ, ರೈತರ ಸಂಕಷ್ಟ, ಸಾಮಾಜಿಕ ಸಾಮರಸ್ಯದ ಬಗ್ಗೆ ರಾಹುಲ್ ಗಾಂಧಿ ಧ್ವನಿಯಾಗಿದ್ದಾರೆ. ಆರ್ಥಿಕ, ಸಾಮಾಜಿಕ ಅಸಮಾನತೆ, ರಾಜಕೀಯ ದ್ವೇಷದ ವಿಚಾರವಾಗಿ ಈ ಯಾತ್ರೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ದೇಶದ ರಾಜಕೀಯ ಇತಿಹಾಸದಲ್ಲಿ ಈ ಯಾತ್ರೆ ಒಂದು ತಿರುವು ನೀಡಲಿದೆ. ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಅಧಿಸೂಚನೆ ಹೊರಡಿಸಲಾಗಿದೆ. ಸೆ.30ರವರೆಗೂ ನಾಮಪತ್ರ ಸಲ್ಲಿಕೆ ಮಾಡಬಹುದು. ಕಾಂಗ್ರೆಸ್ ಪಕ್ಷ ಮಾತ್ರ ತನ್ನ ಅಧ್ಯಕ್ಷರನ್ನು ಪ್ರಜಾಪ್ರಭುತ್ವ ಆಧಾರದ ಮೇಲೆ ಆರಿಸಲಿದೆ. ಅ. 19ರಂದು ನೂತನ ಅಧ್ಯಕ್ಷರ ಆಯ್ಕೆ ಆಗಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಶಾಸಕರ ಸಭೆ: ನಗರದ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಿತು. ಸಭೆ ಬಳಿಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮಾತನಾಡಿ, ಬೊಮ್ಮಾಯಿ ಸರ್ಕಾರ ಅಡಿಯಿಂದ ಮುಡಿಯವರೆಗೆ ಭ್ರಷ್ಟಾಚಾರ ತುಂಬಿದೆ. ಹತಾಶ ಸಿಎಂ ಹತಾಶ ಸರ್ಕಾರ. ಜನರೇ ಈ ಸರ್ಕಾರದ ವಿರುದ್ಧ ವೋಟ್ ಮಾಡಿ ಸರ್ಕಾರ ಕಿತ್ತೊಗೆಯುತ್ತಾರೆ. ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತರನ್ನು ಅರೆಸ್ಟ್ ಮಾಡಲು ಹೋಗಿದ್ದಾರೆ. ಪೊಲೀಸರನ್ನು ಪೋಸ್ಟರ್ ತೆಗೆಯೋದಕ್ಕೆ ಬಳಸಿಕೊಳ್ತಿದ್ದಾರೆ ಎಂದು ಕಿಡಿಕಾರಿದರು.
(ಇದನ್ನೂ ಓದಿ: ಸ್ನೇಕ್ ಬೋಟ್ ಸ್ಪರ್ಧೆಯಲ್ಲಿ ಹುಟ್ಟುಗೋಲು ಹಾಕಿದ ರಾಹುಲ್ ಗಾಂಧಿ: ವಿಡಿಯೋ)