ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಂಬಕ್ಕೂ ಕೊರೊನಾ ಸೋಂಕು ತಗುಲಿದ್ದು, ಇಂದು ಸಿಎಂ ಪುತ್ರನ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಉಳಿದ ಸದಸ್ಯರ ವರದಿ ನಿರೀಕ್ಷಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದ್ದು, ಸಿಎಂ ಪುತ್ರ ಭರತ್ ಬೊಮ್ಮಾಯಿ ಅವರಿಗೆ ಕೋವಿಡ್ ದೃಢಪಟ್ಟಿದೆ.
ಲಘು ರೋಗ ಲಕ್ಷಣಗಳ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಐಸೊಲೇಟ್ ಆಗಿರುವ ಭರತ್ ಬೊಮ್ಮಾಯಿ, ಇತ್ತೀಚೆಗೆ ತಮ್ಮ ಜೊತೆ ಸಂಪರ್ಕಕ್ಕೆ ಬಂದಿದ್ದವರು ಕೋವಿಡ್ ತಪಾಸಣೆಗೆ ಒಳಪಡುವಂತೆ ಮನವಿ ಮಾಡಿ ಟ್ವೀಟ್ ಮಾಡಿದ್ದಾರೆ.
ಹೆಚ್ಚಿನ ಓದಿಗೆ: ಚಂಪಾ ಅಂತ್ಯಕ್ರಿಯೆಗೆ ತೆರಳಿದ್ದ ಸಿಎಂ ಬೊಮ್ಮಾಯಿಗೆ ವಕ್ಕರಿಸಿತು ಕೊರೊನಾ!
ಸಿಎಂ ಬೊಮ್ಮಾಯಿ ಅವರು ಆರ್.ಟಿ ನಗರದ ಖಾಸಗಿ ನಿವಾಸ,ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ನಿವಾಸ, ಗೃಹ ಕಚೇರಿ ಕೃಷ್ಣಾ ಮೂರು ಕಡೆ ನಿನ್ನೆ ಕರ್ತವ್ಯ ನಿರ್ವಹಿಸಿದ್ದಾರೆ. ಹೀಗಾಗಿ ಕುಟುಂಬ ಸದಸ್ಯರು, ಖಾಸಗಿ, ಸರ್ಕಾರಿ ನಿವಾಸದ ಸಿಬ್ಬಂದಿ, ಗೃಹ ಕಚೇರಿ ಸಿಬ್ಬಂದಿಗೆ ಕೋವಿಡ್ ತಪಾಸಣೆ ಮಾಡಲಾಗಿದ್ದು, ವರದಿ ನಿರೀಕ್ಷಿಸಲಾಗಿದೆ.
ಮಣಿಪಾಲ್ ಆಸ್ಪತ್ರೆಗೆ ಸಿಎಂ:
ಕೊರೊನಾ ಪಾಸಿಟಿವ್ ಆಗಿರುವ ಹಿನ್ನೆಲೆ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸಿಎಂ ಬೊಮ್ಮಾಯಿ ತೆರಳಿದ್ದಾರೆ. ವೈದ್ಯರ ಸಲಹೆ ಮೇರೆಗೆ ಮಣಿಪಾಲ್ ಆಸ್ಪತ್ರೆಗೆ ಹೋಗಲು ಮುಂದಾಗಿದ್ದಾರೆ.