ಬೆಂಗಳೂರು: ತೀವ್ರ ಸಂಕಷ್ಟದಲ್ಲಿರುವ ವಾಹನ ಮಾಲೀಕರನ್ನು ರಾಜ್ಯದ ಮುಖ್ಯಮಂತ್ರಿ ನಮ್ಮನ್ನು ಮರೆತಿದ್ದಾರೆ ಎಂದು ರಾಜ್ಯ ಪ್ರವಾಸೋದ್ಯಮ ಖಾಸಗಿ ಸಾರಿಗೆ ವಾಹನ ಮಾಲೀಕರ ಸಂಘದ ಅಧ್ಯಕ್ಷ ಭೈರವ ಸಿದ್ದರಾಮಯ್ಯ ಬೇಸರ ಹೊರಹಾಕಿದ್ದಾರೆ.
ತೀವ್ರ ಸಂಕಷ್ಟದಲ್ಲಿರುವ ವಾಹನ ಮಾಲೀಕರು ಎಷ್ಟು ಬಾರಿ ಮನವಿ ಸಲ್ಲಿಸಿದರೂ ಇದಕ್ಕೆ ರಾಜ್ಯ ಸರ್ಕಾರ ಬೆಲೆ ಕೊಡುತ್ತಿಲ್ಲ. ನಾವು ನೀಡಿದ ಮನವಿ ಪತ್ರವನ್ನು ಒಂಥರಾ ನೋಡಿ ಬಲಗೈನಿಂದ ತೆಗೆದು ಪಕ್ಕಕ್ಕಿಟ್ಟಿರಿ. ಯಾಕೆ ನಾವು ನಿಮಗೆ ಮತ ಕೊಟ್ಟಿಲ್ಲವಾ? ಯಾಕೆ ಬೇಧ ಭಾವ ಮಾಡುತ್ತಿದ್ದೀರಿ? ಪ್ರವಾಸೋದ್ಯಮ ಕ್ಷೇತ್ರದ ಸ್ಥಿತಿ ಏನಾಗಿದೆ ಎನ್ನುವುದು ಗೊತ್ತಾ? ನಾವು ತೆರಿಗೆ ಎಷ್ಟು ಕಟ್ಟುತ್ತಿದ್ದೇವೆ ಎನ್ನುವುದು ಗೊತ್ತಿಲ್ಲವಾ? ನಮ್ಮ ಹಲವು ಸಂಘಟನೆಗಳು ಸಾಕಷ್ಟು ಬಾರಿ ತೆರಿಗೆ ಮನ್ನಾ ಮಾಡುವಂತೆ ಮನವಿ ಸಲ್ಲಿಸಿವೆ. ನಿಮಗೆ ಕೇಳುತ್ತಿಲ್ಲವೇ? ಕೆಎಸ್ಆರ್ಟಿಸಿ ಗೆ ಸಂಬಳ ನೀಡಲು ಹಣ ಕೊಟ್ಟಿದ್ದೀರಿ? ಅದು ಕೂಡ ನಾವು ಕಟ್ಟಿದ ತೆರಿಗೆ ಹಣ. ಚಾಲಕರಿಗೆ 5 ಸಾವಿರ ರೂ. ಘೋಷಿಸಿದ್ದು, ಅದಿನ್ನೂ ಅರ್ಧ ಜನರಿಗೂ ತಲುಪಿಲ್ಲ. ತಾವು ಇದೇ ರೀತಿ ನಡೆದುಕೊಂಡರೆ ನಾವು ಹೋರಾಟ ನಡೆಸಬೇಕಾಗುತ್ತದೆ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೆ ಭೈರವ ಸಿದ್ದರಾಮಯ್ಯ ಎಚ್ಚರಿಕೆ ರವಾನಿಸಿದ್ದಾರೆ.
ಸಾರಿಗೆ ಸಚಿವರಿಗೆ ಎಚ್ಚರಿಕೆ: ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರ ನಡವಳಿಕೆಗೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ನೀವು ಖಾಸಗಿ ವಾಹನ ಮಾಲೀಕರ ಸಮಸ್ಯೆಗೆ ಯಾಕೆ ಸ್ಪಂದಿಸುತ್ತಿಲ್ಲ. ನಮ್ಮಿಂದ ತೆರಿಗೆ ಬರುತ್ತಿಲ್ಲವಾ? ಏಕೆ ದೂರು ಆಲಿಸುತ್ತಿಲ್ಲ. ಮ್ಯಾಕ್ಸಿಕ್ಯಾಬ್, ಬಸ್ ಮಾಲೀಕರು ಎಲ್ಲಿಯೂ ಓಡುತ್ತಿಲ್ಲ. ನಮ್ಮ ವಾಹನ ಮಾಲೀಕರು 80 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ತೆರಿಗೆ ತುಂಬುತ್ತಿದ್ದಾರೆ. ನಿಂತಲ್ಲಿಯೇ ವಾಹನಗಳು ನಿಂತು ಕೆಟ್ಟು ಹೋಗುತ್ತಿವೆ. ಕೋವಿಡ್- 19 ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಇಷ್ಟು ದಿನ ಸುಮ್ಮನಿದ್ದೆವು. ನೀವು ನಿಮ್ಮ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ? ನಿಮ್ಮಲ್ಲಿ ಅನಗತ್ಯ ಹುದ್ದೆ ಸೃಷ್ಟಿಸಿ ಹಣ ನೀಡುವ ಬದಲು ನಮ್ಮ ತೆರಿಗೆ ಮನ್ನಾ ಮಡಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು ಮಾತನಾಡಿರುವ ಅವರು, ನಮ್ಮ ವಿವಿಧ ಸಂಘಟನೆಗಳೆಲ್ಲಾ ಒಂದಾಗಬೇಕು. ನಮ್ಮವರೆಲ್ಲಾ ಒಂದಾಗಿ ಸಿಎಂ ನಿವಾಸಕ್ಕೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕೋಣ. ನಮ್ಮಲ್ಲಿ ದೊಡ್ಡ ದೊಡ್ಡ ಸಂಘಟನೆಯ ಮುಖ್ಯಸ್ಥರು ಈ ಸಂದರ್ಭ ಸುಮ್ಮನೆ ಕೂರುವುದು ಬೇಡ. ನಾನು ಪ್ರತಿಪಕ್ಷದ ನಾಯಕರಿಗೂ ಮನವಿ ಸಲ್ಲಿಸಿದ್ದೇನೆ. ನಮ್ಮ ಸಂಘಟನೆಗಳೆಲ್ಲಾ ಒಂದಾಗಿ ಸಭೆ ನಡೆಸಿ ಹೋರಾಡೋಣ. ನಾವೆಲ್ಲಾ ಇಂಧನ ಜಾತಿಯವರು. ಜಿಲ್ಲಾ ಮಟ್ಟಗಳಲ್ಲಿ ಹೋರಾಟಕ್ಕೆ ನಮ್ಮವರು ಮುಂದಾಗಬೇಕು. ರಾಜ್ಯ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗೋಣ ಎಂದು ಭೈರವ ಸಿದ್ದರಾಮಯ್ಯ ಕರೆ ಕೊಟ್ಟಿದ್ದಾರೆ.