ಬೆಂಗಳೂರು : ಹಲವು ಬ್ಯಾಂಕ್ಗಳ ಹೆಸರಿನಲ್ಲಿ ನಕಲಿ ಖಾತೆಗಳು ಸೃಷ್ಟಿಯಾಗುತ್ತಿವೆ. ಈಗ ಕೊರೊನಾ ವ್ಯಾಪಿಸುತ್ತಿರುವ ಬೆನ್ನಲ್ಲೇ ನಕಲಿ ಪಿಎಂ ಕೇರ್ಸ್ ಖಾತೆಗಳು ಹುಟ್ಟಿಕೊಳ್ಳುತ್ತಿವೆ. ಈ ಮೂಲಕ ದಾನಿಗಳ ಹಣ ಸೈಬರ್ ವಂಚಕರ ಪಾಲಾಗುತ್ತಿದೆ. ಪ್ರಧಾನಿ ಮೋದಿ ದೇಶದ ಜನರಲ್ಲಿ ಮಾಡಿದ್ದ ಮನವಿಗೆ ಸ್ಪಂದಿಸಿ ಲಕ್ಷಾಂತರ ಮಂದಿ ನೀಡುತ್ತಿದ್ದ ದೇಣಿಗೆ ವಂಚಕರ ಪಾಲಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು ಅಸಲಿ ಹಾಗೂ ನಕಲಿ ಖಾತೆಗಳ ಬಗ್ಗೆ ವಿವರಣೆ ನೀಡಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿವೃತ್ತ ಬ್ಯಾಂಕ್ ಅಧಿಕಾರಿ ಡಿಜಿಟಲ್ ಪೇಮೆಂಟ್ನಲ್ಲಿ ಅಧಿಕೃತ ಖಾತೆಯನ್ನು ಖಾತ್ರಿ ಪಡಿಸಿಕೊಂಡು ನಂತರ ದೇಣಿಗೆ ನೀಡಿ. ಯಾವುದೋ ವಾಟ್ಸಪ್ ಸಂದೇಶಕ್ಕೆ ಮರುಳಾಗಿ ಹಣ ಕಳೆದುಕೊಳ್ಳಬೇಡಿ. ಕೇಂದ್ರ ಸಚಿವಾಲಯದಿಂದ ಅಧಿಕೃತವಾಗಿ ಬಿಡುಗಡೆ ಮಾಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆ, ಐಎಫ್ಎಸ್ಸಿ ಸಂಖ್ಯೆ ಮತ್ತು ವಿಳಾಸವನ್ನು ಹೊರತುಪಡಿಸಿದರೆ ಯಾವುದೇ ಬ್ಯಾಂಕಿನಲ್ಲಿ ಈ ನಿಧಿ ಬ್ಯಾಂಕ್ ಖಾತೆ ಇರುವುದಿಲ್ಲ. ಇಂತಹ ನಕಲಿ ಖಾತೆ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಪಿಎಂ ಕೇರ್ಸ್ನ ಅಸಲಿ ಖಾತೆ ಬಗ್ಗೆ ಮಾಧ್ಯಮಗಳಲ್ಲಿ ಭಿತ್ತರಿಸುವುದರಿಂದ ನಕಲಿ ಐಡಿ ಖಾತೆಗಳ ಬಗ್ಗೆ ಜನರು ಜಾಗೃತರಾಗುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೀಗಿರುತ್ತದೆ ಪಿಎಂ ಕೇರ್ಸ್ನ ಅಸಲಿ ಖಾತೆ:
ಪಿಎಂ ಕೇರ್ಸ್ಗೆ ಹಣ ಕಳುಹಿಸಲು ಕೇಂದ್ರ ಸರ್ಕಾರ pmcares@sbi ಎಂಬ ಯುಪಿಐ ಐಡಿಯನ್ನು ರಚಿಸಿದೆ. ಇದರ ಮೂಲಕ ದೇಣಿಗೆ ನೀಡಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ. ವಂಚಕರು pmcare@sbi ಎಂಬ ಯುಪಿಐ ಐಡಿಯನ್ನು ರಚಿಸಿದ್ದು, ''s'' ಅಕ್ಷರವನ್ನು ತೆಗೆದಯಲಾಗಿದೆ. ಈ ಖಾತೆಗೆ ಹಣ ಕಳುಹಿಸಬಾರದೆಂದು ಕೇಂದ್ರ ಸರ್ಕಾರ ಸೂಚಿಸಿದೆ.
ಇವು ನಕಲಿ ಐಡಿಗಳು :
ಕೆಲವು ನಕಲಿ ಖಾತೆಗಳ ಜೊತೆಗೆ mcares@PNB, pmcares@hdfcbank, pmcare@yesbank, pmcar@ybl ನಂತಹ ಹಲವಾರು ಖಾತೆಗಳೂ ಕೂಡಾ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದು ಬಂದಿದೆ. ಪಿಎಂ ಕೇರ್ಸ್ ಫಂಡ್ ಯುಪಿಐ ಐಡಿ ಎಂದು pmcare@commat:upi ಎಂಬ ಹೆಸರಿನಲ್ಲಿ ಹಣ ಕಳಿಸುವಂತೆ ಮನವಿ ಬಂದರೆ ನಿರ್ಲಕ್ಷಿಸಬೇಕೆಂದು, ಯಾವುದೇ ಡಿಜಿಟಲ್ ಪೇಮೆಂಟ್ನಲ್ಲಿ ಈ ಐಡಿಗೆ ಹಣ ಕಳಿಸಬಾರದೆಂದು ಕೇಂದ್ರ ಸರ್ಕಾರ ತಿಳಿಸಿದೆ.