ಬೆಂಗಳೂರು: ಶಾಶ್ವತ ವಿದ್ಯುತ್ ಮೀಟರ್ ಅಳವಡಿಸಲು 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಬೆಸ್ಕಾಂ ಸಹಾಯಕ ಎಂಜಿನಿಯರ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಬಸವೇಶ್ವರನಗರ ಉಪ ವಿಭಾಗದ ಬೆಸ್ಕಾಂ ಕಚೇರಿಯ ಸಹಾಯಕ ಎಂಜಿನಿಯರ್ ಆನಂದ್ ಬಂಧಿತ ಅಧಿಕಾರಿ.
ಮಂಜೇಶ್ ಎಂಬುವರು ಶಾಶ್ವತ ವಿದ್ಯುತ್ ಮೀಟರ್ ಅಳವಡಿಕೆಗಾಗಿ ಬಸವೇಶ್ವರನಗರದ ಬೆಸ್ಕಾಂ ಉಪ ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಕೆಲ ತಿಂಗಳುಗಳಿಂದ ಬೆಸ್ಕಾಂನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಮಂಜೇಶ್ ಬೆಸ್ಕಾಂ ಎ.ಇ. ಆನಂದ್ ಅವರನ್ನು ಸಂಪರ್ಕಿಸಿ ಈ ಬಗ್ಗೆ ಪ್ರಶ್ನಿಸಿದ್ದರು. ಶಾಶ್ವತವಾಗಿ ಮೀಟರ್ ಅಳವಡಿಸಲು 50 ಸಾವಿರ ರೂಪಾಯಿ ಲಂಚಕ್ಕೆ ಆನಂದ್ ಬೇಡಿಕೆಯಿಟ್ಟಿದ್ದರು ಎನ್ನಲಾಗ್ತಿದೆ.
ಲಂಚ ಕೊಡಲು ಇಚ್ಛಿಸದ ಮಂಜೇಶ್ ಲೋಕಾಯುಕ್ತಕ್ಕೆ ಈ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು, ರಾಜಾಜಿನಗರದ ಮುಖ್ಯ ರಸ್ತೆ ಬಳಿ ಶುಕ್ರವಾರ ಮಂಜೇಶ್ ಅವರಿಂದ ಆನಂದ್ 40 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ್ದಾರೆ. ಆನಂದ್ ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಚಿಕ್ಕಮಗಳೂರು: ಹಾಸ್ಟೆಲ್‍ನಲ್ಲೇ ಪಿಯುಸಿ ವಿದ್ಯಾರ್ಥಿನಿಗೆ ಹೆರಿಗೆ.. ವಾರ್ಡನ್ ವಿರುದ್ಧ ದಲಿತ ಸಂಘಟನೆ ಆಕ್ರೋಶ