ಬೆಂಗಳೂರು: ಬೈಕರ್‌ಗಳಾಗಿರುವ ನಗರದ ಇಬ್ಬರು ಸಹೋದರರು ಕೋವಿಡ್ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಚಾಲಕರಾಗಿ ಕಾರ್ಯ ನಿರ್ವಹಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ನಗರದ ಆಡುಗೋಡಿಯ ನಿವಾಸಿಗಳಾದ ಮುರ್ತಾಝ್ ಜುನೈದ್ ಮತ್ತು ಮುತೀಬ್ ಝೊಹರ್ ಈ ಕಾರ್ಯ ಮಾಡುತ್ತಿರುವ ಸಹೋದರರು. ಬೈಕರ್ಗಾಳಾಗಿರುವ ಇವರು ಲಡಾಖ್, ಜಮ್ಮು ಸೇರಿದಂತೆ ದೇಶದ ಬಹುತೇಕ ಸ್ಥಳಗಳನ್ನು ಬೈಕ್ ಮೂಲಕವೇ ಸುತ್ತಾಡಿದ್ದಾರೆ.
ಇದೀಗ ಕೋವಿಡ್ ಸಂದರ್ಭದಲ್ಲಿ ಜನಸೇವೆ ಮಾಡಲು ಮಂದಾಗಿದ್ದು ಸ್ವಇಚ್ಚೆಯಿಂದ ಆ್ಯಂಬುಲೆನ್ಸ್ ಚಾಲಕರಾಗಿ ಬಿಡುವಿಲ್ಲದೆ ಜನರ ಸೇವೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ಬಂಧು-ಬಳಗ ಅಲ್ಲ ಹೃದಯವಂತರು.. ಕೊರೊನಾದಿಂದ ಮೃತಪಟ್ಟವರ ಪಾಲಿಗೆ "ಮುಕ್ತಿದಾತರು"
ಈ ಕುರಿತು ಮಾತನಾಡಿರುವ ಜುನೈದ್, ಇದು ನಮ್ಮ ದೇಶಕ್ಕೆ ಸೇವೆ ಮಾಡಲು ನಮಗೆ ದೊರಕಿರುವ ಸದಾವಕಾಶ. ಕೇವಲ ಎರಡು ತಿಂಗಳ ಹಿಂದೆ ನಾವು ನಮ್ಮ ತಾಯಿಯನ್ನು ಕಳೆದುಕೊಂಡೆವು. ತಮ್ಮವರನ್ನು ಕಳೆದುಕೊಳ್ಳುವ ನೋವೇನೆಂದು ನಮಗೆ ಅರಿವಾಗಿದೆ. ಎಲ್ಲಕ್ಕಿಂತ ಮಾನವೀಯತೆ ಮೊದಲು. ಎಲ್ಲರೂ ಭಯಪಟ್ಟುಕೊಂಡು ಕೂತರೆ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವವರು ಯಾರು? ಎಂದು ಹೇಳುತ್ತಾರೆ.
ಇವರ ಸಹೋದರ ಝೊಹರ್ ಮಾತನಾಡಿ, ಬಡ ಜನರು ಆಟೋದಲ್ಲಿ ಆಸ್ಪತ್ರೆಗೆ ಬಂದರೆ ಅವರನ್ನು ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಆ್ಯಂಬುಲೆನ್ಸ್ನಲ್ಲಿ ಹೋದರೆ ಮಾತ್ರ ಪರಿಗಣಿಸುತ್ತಾರೆ. ಹಾಗಾಗಿ, ನಾವು ಆ್ಯಂಬುಲೆನ್ಸ್ ಮೂಲಕ ಜನರಿಗೆ ಕೈಲಾದ ಸಹಾಯ ಮಾಡುತ್ತಿದ್ದೇವೆ ಎಂದರು.