ಬೆಂಗಳೂರು: ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಟೆಕ್ಕಿ ಕುಟುಂಬದ ನಾಲ್ವರ ಸಾವಿಗೆ ಷೇರು ವ್ಯವಹಾರದ ನಷ್ಟವೇ ಕಾರಣ ಎಂಬುದು ಪೊಲೀಸರ ತನಿಖೆ ವೇಳೆ ಕಂಡು ಬಂದಿದೆ. ಪತ್ನಿ ಹಾಗೂ ಮಕ್ಕಳನ್ನ ಹತ್ಯೆ ಮಾಡಿದ ಬಳಿಕ ಪತಿ ಮೂರು ದಿನ ಶವಗಳ ಜೊತೆಯೇ ಕಳೆದು ಬಳಿಕ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದು ಬಂದಿದೆ.
ಆಂಧ್ರ ಪ್ರದೇಶ ಮೂಲದ ವೀರಾರ್ಜುನ ವಿಜಯ್ (31) ಆತನ ಪತ್ನಿ ಹೇಮಾವತಿ (29) ಮಕ್ಕಳಾದ ಎರಡೂವರೆ ವರ್ಷದ ಮೋಕ್ಷ ಹಾಗೂ 8 ತಿಂಗಳ ಮಗು ಸೃಷ್ಟಿ ಸುನಯನ ಮೃತಪಟ್ಟಿದ್ದ ದುರ್ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೀಗೆಹಳ್ಳಿಯ ಸಾಯಿಗಾರ್ಡನ್ ಅಪಾರ್ಟ್ಮೆಂಟ್ನಲ್ಲಿ ಗುರುವಾರ ನಡೆದಿತ್ತು. ಆರು ವರ್ಷಗಳ ಹಿಂದೆ ಹೇಮಾವತಿಯೊಂದಿಗೆ ಮದುವೆಯಾಗಿದ್ದ ವೀರಾರ್ಜುನ ವಿಜಯ್ ಕಾಡುಗೋಡಿಯ ಸಿಗೇಹಳ್ಳಿಯ ಸಾಯಿಗಾರ್ಡನ್ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು.
ಷೇರು ವ್ಯವಹಾರದ ನಷ್ಟ: ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ವಿರಾರ್ಜುನ ವಿಜಯ್ ಕುಂದಲಹಳ್ಳಿ ಬಳಿಯಿರುವ ಕಂಪನಿಯಲ್ಲಿ ಟೀಂ ಲೀಡರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲ ವರ್ಷಗಳಿಂದ ಷೇರು ವ್ಯವಹಾರದಲ್ಲಿ ತೊಡಗಿದ್ದ ಅವರು ಸಂಬಳ ಮಾತ್ರವಲ್ಲದೇ ಸಾಲ ಮಾಡಿ ಷೇರು ವ್ಯವಹಾರದಲ್ಲಿ ತೊಡಗಿಸಿ ನಷ್ಟ ಅನುಭವಿಸಿದ್ದರು. ವೀರಾರ್ಜುನ ವಿಜಯ್ ಅವರರ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಪರಿಶೀಲಿಸಿದಾಗ ಅವರು ಷೇರು ವ್ಯವಹಾರದಲ್ಲಿ ತೊಡಗಿಸಿಕೊಂಡು ನಷ್ಟ ಅನುಭವಿಸಿದ್ದ ವಿಚಾರ ತಿಳಿದು ಬಂದಿದೆ.
ಮೂರು ದಿನ ಶವಗಳ ನಡುವೆ ವಾಸ: ಸಾವಿನ ಮನೆಯಿಂದ ದುವಾರ್ಸನೆ ಕಂಡು ಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಬಂದು ಬಾಗಿಲು ಹೊಡೆದು ಒಳಗೆ ಹೋಗಿ ಪರಿಶೀಲಿಸಿದಾಗ ನಾಲ್ವರು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿದ್ದವು.
ಹೇಮಾವತಿ ಮತ್ತು ಇಬ್ಬರು ಮಕ್ಕಳ ಮೃತದೇಹಗಳು ಬೆಡ್ ರೂಂನ ನೆಲದ ಮೇಲೆ ಬಿದ್ದಿದ್ದವು. ವೀರಾರ್ಜುನ ವಿಜಯ್ ಶವ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಹೇಮಾವತಿಯ ಮೃತದೇಹ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲು ಹೇಮಾವತಿ, ನಂತರ ಮಕ್ಕಳು ಕೊನೆಗೆ ವೀರಾರ್ಜುನ ವಿಜಯ್ ಮೃತಪಟ್ಟಿರುವುದು ಎಫ್ಎಸ್ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿಯಲ್ಲಿ ಬಹಿರಂಗವಾಗಿದೆ.
ಜು.31ರಂದು ಪತ್ನಿಯನ್ನ ಕತ್ತು ಹಿಸುಕಿ ಕೊಂದ ವೀರಾರ್ಜುನ ವಿಜಯ್, ನಂತರ ಆಗಸ್ಟ್ 1ರಂದು ಮಕ್ಕಳನ್ನ ಉಸಿರುಗಟ್ಟಿಸಿ ಕೊಂದಿದ್ದ. ಮೂರು ದಿನಗಳ ಕಾಲ ಶವಗಳೊಂದಿಗೆ ಕಳೆದು ಅಂತಿಮವಾಗಿ ಆತ ಆ.2ರಂದು ನೇಣಿಗೆ ಶರಣಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ಕು ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಶುಕ್ರವಾರ ಕುಟುಂಬಸ್ಥರಿಗೆ ಮೃತದೇಹಗಳನ್ನ ಹಸ್ತಾಂತರಿಸಲಾಗಿದೆ. ಶವಗಳನ್ನ ಆಂಧ್ರಪ್ರದೇಶಕ್ಕೆ ಕೊಂಡೊಯ್ಯಲಾಗಿದೆ ಎಂದು ಕಾಡುಗೋಡಿ ಠಾಣಾ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಹೆಂಡತಿ ಮಕ್ಕಳನ್ನ ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ..