ಬೆಂಗಳೂರು : ಬೆಂಗಳೂರು ಟೆಕ್ ಸಮ್ಮಿಟ್ 2020 ನವೆಂಬರ್ 19 ರಿಂದ 21ರವರೆಗೆ ನಡೆಯಲಿದೆ ಎಂದು ಐಟಿಬಿಟಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿ ನಂತರ ಈಟಿವಿ ಭಾರತ್ ಪ್ರತಿನಿಧಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರತಿಷ್ಠಿತ ಈವೆಂಟ್ ಆದ ಬೆಂಗಳೂರು ಟೆಕ್ ಸಮ್ಮಿಟ್ ನಮ್ಮ ರಾಜ್ಯಕ್ಕೆ ಜೀವನಾಡಿ ಹಾಗೂ ಭವಿಷ್ಯವಾಗಿದೆ.
ಈ ಈವೆಂಟ್ ಕಳೆದ 22 ವರ್ಷದದಿಂದ ನಡೆದುಕೊಂಡು ಬಂದಿದೆ. ಇದರಲ್ಲಿ ಜಾಗತಿಕ ನಾಯಕರು, ಪ್ರಭಾವಿ ಕಂಪನಿಗಳು, ಇನ್ನೋವೇಟರ್ಸ್, ಬಂಡವಾಳಗಾರರು ಹಾಗೂ ಚಿಂತಕರು ಪಾಲ್ಗೊಳ್ಳಲಿದ್ದು, ಇಲ್ಲಿ ನಮ್ಮ ಶಕ್ತಿ ಹಾಗೂ ಪ್ರತಿಭೆಗೆ ಸೂಕ್ತ ವೇದಿಕೆಯಾಗಿದೆ ಎಂದರು.
ಮಾಹಿತಿ ತಂತ್ರಜ್ಞಾನ, ಬಯೋಟೆಕ್ನಾಲಜಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಪರಸ್ಪರ ವಿನಿಯೋಗದ ಮೂಲಕ ಇದು ತುಂಬಾ ಸಹಕಾರಿಯಾಗಲಿದೆ. ಇದರಿಂದ ನಮ್ಮ ಮಾನ್ಯತೆ ಮತ್ತು ಗೌರವ ಎರಡೂ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ, ಸಾರಿಗೆ ಕ್ಷೇತ್ರದಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಮಟ್ಟದ ಉದ್ಯೋಗ ನಿರ್ಮಾಣವಾಗಲು ಪ್ರಯತ್ನಿಸುತ್ತೇವೆ ಎಂದರು. ಅಲ್ಲದೇ ಸ್ಟಾರ್ಟಪ್‌ಗಳಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.