ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿವಾರಣೆಯ ಗುರಿಯೊಂದಿಗೆ ಕೈಗೆತ್ತಿಕೊಂಡಿರುವ ಉಪನಗರ ರೈಲು ಯೋಜನೆಯನ್ನು ಸುತ್ತಮುತ್ತಲಿನ ಜಿಲ್ಲೆಗಳಿಗೂ ವಿಸ್ತರಿಸಲು ಚಿಂತನೆ ನಡೆಸಲಾಗಿದೆ ಎಂದು ಎಂ.ಬಿ ಪಾಟೀಲ ತಿಳಿಸಿದ್ದಾರೆ.
ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ ಲಿಮಿಟೆಡ್ (ಕೆ-ರೈಡ್) ಬೆಂಗಳೂರು ಉಪನಗರ ರೈಲು ಯೋಜನೆಯನ್ನು (ಬಿಎಸ್‌ಆರ್‌ಪಿ) ಹತ್ತಿರದ ನಗರಗಳು ಮತ್ತು ಪಟ್ಟಣಗಳಿಗೆ ವಿಸ್ತರಿಸಲು 452 ಕಿಮೀ ಉದ್ದದ ಹೊಸ ಪ್ರಸ್ತಾವನೆ ಸಿದ್ಧಪಡಿಸಿದೆ ಮತ್ತು ಪೂರ್ವಭಾವಿ ಅಧ್ಯಯನ ನಡೆಸಲು ನೈರುತ್ಯ ರೈಲ್ವೆ ವಲಯದ ಅನುಮೋದನೆಯನ್ನು ಕೋರಿದೆ ಎಂದು ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ.
ಉಪನಗರ ರೈಲು ಯೋಜನೆಯ ಪ್ರಗತಿ ಕುರಿತು ಸೋಮವಾರ ಕೆ-ರೈಡ್ ಉನ್ನತ ಅಧಿಕಾರಿಗಳೊಂದಿಗೆ ಅವರು ಸೋಮವಾರ ಪರಿಶೀಲನಾ ಸಭೆ ನಡೆಸಿದರು. ಬಳಿಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಕೋಲಾರ, ತುಮಕೂರು, ಮೈಸೂರು, ಬಂಗಾರಪೇಟೆ, ಹೊಸೂರು ಮತ್ತು ಗೌರಿಬಿದನೂರು ನಗರಗಳಿಗೆ ಬಿಎಸ್‌ಆರ್‌ಪಿ ನೆಟ್‌ವರ್ಕ್ ಅನ್ನು ವಿಸ್ತರಿಸುವ ಯೋಜನೆಯ ಹೊಸ ಪ್ರಸ್ತಾವನೆ ಕುರಿತು ನೈರುತ್ಯ ರೈಲ್ವೆ ವಲಯಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಪ್ರಸ್ತಾವನೆಯ ಪ್ರಕಾರ, 2ನೇ ಹಂತದ ವಿಸ್ತರಣೆ ಒಟ್ಟು ಉದ್ದ 452 ಕಿ.ಮೀ ಉದ್ದವನ್ನು ಒಳಗೊಂಡಿದೆ. ದೇವನಹಳ್ಳಿಯಿಂದ ಕೋಲಾರ (107 ಕಿ.ಮೀ), ಚಿಕ್ಕಬಾಣಾವರದಿಂದ ಡಾಬಸ್‌ಪೇಟೆ ಮೂಲಕ ತುಮಕೂರು (55 ಕಿ.ಮೀ), ಚಿಕ್ಕಬಾಣಾವರದಿಂದ ಮಾಗಡಿ (45 ಕಿ.ಮೀ), ಕೆಂಗೇರಿಯಿಂದ ಮೈಸೂರು (125 ಕಿ.ಮೀ), ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆ (45 ಕಿ.ಮೀ), ಹೀಳಲಿಗೆಯಿಂದ ತಮಿಳುನಾಡಿನ ಹೊಸೂರು (23 ಕಿ.ಮೀ) ಮತ್ತು ರಾಜಾನುಕುಂಟೆಯಿಂದ ದೊಡ್ಡಬಳ್ಳಾಪುರದ ಮಾರ್ಗವಾಗಿ ಗೌರಿಬಿದನೂರಿನವರೆಗೆ (52 ಕಿ.ಮೀ) ವಿಸ್ತರಿಸಬೇಕೆಂಬುದು ಈ ಪ್ರಸ್ತಾವನೆ ಒಳಗೊಂಡಿದೆ.
ಸದ್ಯಕ್ಕೆ ಪ್ರಗತಿಯಲ್ಲಿರುವ 148 ಕಿ.ಮೀ. ವ್ಯಾಪ್ತಿಯ ಉಪನಗರ ರೈಲು ಯೋಜನೆಯಲ್ಲಿ ಒಟ್ಟು ನಾಲ್ಕು ಕಾರಿಡಾರ್‌ಗಳಿವೆ. ಇದು ಕ್ರಮವಾಗಿ ಬೆಂಗಳೂರು ನಗರ ರೈಲು ನಿಲ್ದಾಣದಿಂದ ದೇವನಹಳ್ಳಿ (41.4 ಕಿ.ಮೀ), ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ (25.01 ಕಿ.ಮೀ), ಕೆಂಗೇರಿಯಿಂದ ವೈಟ್‌ಫೀಲ್ಡ್ (25.01 ಕಿ.ಮೀ) ಮತ್ತು ಹೀಳಲಿಗೆಯಿಂದ ರಾಜಾನುಕುಂಟೆವರೆಗೆ (46.25 ಕಿ.ಮೀ) ಉದ್ದವಿದೆ.
ಈ ಯೋಜನೆಗೆ 177.22 ಎಕರೆ ಭೂಮಿ ಅಗತ್ಯವಿದೆ. ಈ ಪೈಕಿ ಈಗಾಗಲೇ 164 ಎಕರೆಯ ಸ್ವಾಧೀನ ಕಾರ್ಯ ಮುಗಿದಿದೆ. ಆದರೆ ಉಳಿದ 12.39 ಎಕರೆ ಭೂಮಿ ರಕ್ಷಣಾ ಇಲಾಖೆ ಮತ್ತು ಸರಕಾರದ್ದಾಗಿದ್ದು, ಸ್ವಲ್ಪ ಕಗ್ಗಂಟಾಗಿದೆ. ಕೆ-ರೈಡ್ ಅಧಿಕಾರಿಗಳು ಸಂಬಂಧಿಸಿದವರ ಜತೆ ಮಾತುಕತೆ ನಡೆಸಿದ್ದಾರೆ. ಈ ಸಮಸ್ಯೆಯನ್ನು ಆದಷ್ಟು ಬೇಗನೆ ಬಗೆಹರಿಸಬೇಕಾಗಿದೆ. ಯೋಜನೆಯ ಭಾಗವಾಗಿ ಸೋಲದೇವನಹಳ್ಳಿ ಮತ್ತು ದೇವನಹಳ್ಳಿಯಲ್ಲಿ ಎರಡು ಡಿಪೋ ನಿರ್ಮಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಈ ಯೋಜನೆಯಿಂದಾಗಿ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರಲಿದೆ. ಇಲ್ಲಿರುವ ಉದ್ದಿಮೆಗಳಿಗೆ ಸುತ್ತಮುತ್ತಲ ನಗರ ಮತ್ತು ಪಟ್ಟಣಗಳಿಂದ ಉದ್ಯೋಗಿಗಳು ಯಾವುದೇ ತೊಂದರೆ ಅನುಭವಿಸದೇ ಸಂಚರಿಸಲಿದ್ದಾರೆ ಎಂಬುದು ಅವರ ಆಶಯವಾಗಿದೆ.