ಬೆಂಗಳೂರು : ಸಿಲಿಕಾನ್ ಸಿಟಿಗೆ ನಿನ್ನೆ ವರ್ಷದ ಮೊದಲ ಮಳೆಯ ಸಿಂಚನವಾಗಿದೆ. ಇಂದು ಕೂಡ ಬಹುತೇಕ ಎಲ್ಲ ಬಡಾವಣೆಗಳಲ್ಲಿ ಮಳೆಯಾಗಿರುವ ವರದಿ ಹೊರಬಿದ್ದಿವೆ.
ಬಂಗಾಳಕೊಲ್ಲಿಯ ವಾಯುಭಾರ ಕುಸಿತ ಮತ್ತು ಅಸಾನಿ ಚಂಡಮಾರುತದ ಪರಿಣಾಮ ರಾಜ್ಯದ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿದಿದೆ. ರಾಜ್ಯಾದ್ಯಂತ ಬಿಸಿಲ ಬೇಗೆಯಿಂದ ಬೇಸತ್ತಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಸಂಜೆಯ ವೇಳೆಯಲ್ಲಿ ರಾಜಧಾನಿಯ ಮಲ್ಲೇಶ್ವರಂ, ಸದಾಶಿವನಗರ, ಚಾಮರಾಜಪೇಟೆ, ಚಿಕ್ಕಪೇಟೆಯಲ್ಲಿ ಮಳೆಯ ಸಿಂಚನವಾಗಿದೆ.
ನಗರದ ಹೊರವಲಯದಲ್ಲೂ ಮಳೆ : ಗಿರಿನಗರ, ಹನುಮಂತನಗರ, ಬನಶಂಕರಿ, ಬಸವನಗುಡಿ, ಜಯನಗರ, ಜೆಪಿನಗರ, ಕುರುಬರಹಳ್ಳಿ, ಪದ್ಮನಾಭನಗರ, ಗಾಂಧಿನಗರ, ಕಾಟನ್‌ಪೇಟೆ ಹಾಗೂ ಕಬ್ಬನ್‌ಪಾರ್ಕ್, ಕೆ.ಆರ್ ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ನಗರದ ಹೊರ ಭಾಗದಲ್ಲೂ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ...
ಮುಂದಿನ 48 ಗಂಟೆಗಳು ರಾಜಧಾನಿ ಸೇರಿದಂತೆ ಕರ್ನಾಟಕದ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಸಾನಿ ಚಂಡಮಾರುತದ ಪರಿಣಾಮದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮೀನುಗಾರರಿಗೆ ಮುಂದಿನ 24 ಗಂಟೆ ಯಾವುದೇ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿಲ್ಲವಾದರೂ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.
ಗುಡುಗು ಸಹಿತ ಮಳೆಯಾಗಲಿದೆ..
ಬೆಂಗಳೂರು, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಮತ್ತು ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮಧ್ಯಾಹ್ನದ ವೇಳೆ ನಗರದಲ್ಲಿ ಭಾನುವಾರ 30 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಮುಂದಿನ 48 ಗಂಟೆಗಳು ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹೇಳಿದೆ.
ಓದಿ: ಸತ್ಯ ಸ್ವೀಕರಿಸೋದಕ್ಕೆ ಎದೆಗಾರಿಕೆ ಬೇಕು, ಕಾಂಗ್ರೆಸ್‌ನವರಿಗೆ ಅಂತಹ ಎದೆಗಾರಿಕೆ ಇಲ್ಲ: ಪ್ರತಾಪ್ ಸಿಂಹ