ಬೆಂಗಳೂರು: ರಾಜಧಾನಿ ಹೊರವಲಯದ ಸಾದಹಳ್ಳಿ ಗೇಟ್ ಬಳಿಯಿರುವ ಜೆಡಿ ಗಾರ್ಡನ್ ರೆಸಾರ್ಟ್ ಮೇಲೆ ಕಳೆದ ಸೆಪ್ಟೆಂಬರ್ನಲ್ಲಿ ದಾಳಿ ನಡೆಸಿ ದಾಖಲಿಸಿಕೊಂಡಿದ್ದ ಪ್ರಕರಣ ಸಂಬಂಧ ಸಿಐಡಿ ತನಿಖೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
ಕೂಲಂಕಷ ತನಿಖೆಗಾಗಿ ಸಿಸಿಬಿ ಡಿಜಿ ಪ್ರವೀಣ್ ಸೂದ್ ಅವರಿಗೆ ಸಿಸಿಬಿಗೆ ಪತ್ರ ಬರೆದು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಿಐಡಿ ಹೆಗಲಿಗೆ ಪ್ರಕರಣ ಹಸ್ತಾಂತರವಾಗುವ ಸಾಧ್ಯತೆಯಿದೆ. ಈ ಬಗ್ಗೆ ಅಧಿಕೃತವಾಗಿ ಆದೇಶದ ಮಾಹಿತಿ ಲಭ್ಯವಾಗಿಲ್ಲ.
ಸಾದಹಳ್ಳಿ ಗೇಟ್ ಬಳಿಯ ಜೆಡಿ ಗಾರ್ಡನ್ ರೆಸಾರ್ಟ್ನಲ್ಲಿ ರೇವ್ ಪಾರ್ಟಿ ನಡೆಯುತ್ತಿರುವ ಮಾಹಿತಿ ಮೇರೆಗೆ ಸೆಪ್ಟೆಂಬರ್ 6 ರಂದು ಸಿಸಿಬಿ ಮಹಿಳಾ ಸಂರಕ್ಷಣಾ ಘಟಕ ಎಸಿಪಿ ರೀನಾ ಸುವರ್ಣ ನೇತೃತ್ವದ ತಂಡ ದಾಳಿ ನಡೆಸಿತ್ತು. ಅಲ್ಲದೇ ವೇಶ್ಯಾವಾಟಿಕೆ ಜಾಲದಲ್ಲಿ ಯುವತಿಯರನ್ನು ರಕ್ಷಿಸಿ ರೆಸಾರ್ಟ್ ಮಾಲೀಕ ಶ್ರೀನಿವಾಸ್ ಸೇರಿ 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ರೇವ್ ಪಾರ್ಟಿಯಲ್ಲಿ ಉದ್ಯಮಿ ಹಾಗೂ ಪ್ರಭಾವಿ ಮಕ್ಕಳು ಸೇರಿ ಸುಮಾರು 40ಕ್ಕಿಂತ ಹೆಚ್ಚು ಮಂದಿ ಭಾಗಿಯಾಗಿದ್ದರು ಎನ್ನಲಾಗಿದೆ.
ಪ್ರಭಾವಿಗಳ ಮಕ್ಕಳನ್ನು ಬಂಧಿಸದೇ ಸಿಸಿಬಿ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ ಎಂಬ ಆಪಾದನೆ ಕೇಳಿ ಬಂದಿತ್ತು. ಸದ್ಯ ಇಷ್ಟು ದಿನಗಳ ಕಾಲ ತನಿಖೆ ನಡೆಸಿದ್ದ ಸಿಸಿಬಿಯು ಡಿಜಿಗೆ ಪತ್ರ ಬರೆದು ಸಿಐಡಿಗೆ ಒಪ್ಪಿಸುವಂತೆ ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ಪ್ರಕರಣವನ್ನ ಸಿಐಡಿಗೆ ಹೋಗುವ ಎಲ್ಲ ಲಕ್ಷಣ ಕಾಣಿಸುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಸಿಐಡಿಗೆ ಪ್ರಕರಣ ಒಪ್ಪಿಸುವಂತೆ ಡಿಜಿ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಪ್ರಕರಣ ಹಸ್ತಾಂತರಗೊಳಿಸುವಂತೆ ಅಧಿಕೃತ ಆದೇಶ ಬಂದಿಲ್ಲ ಎಂದ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ: ಉದ್ಯಮಿ, ಪ್ರಭಾವಿ ರಾಜಕಾರಣಿಗಳ ಪುತ್ರರು ಭಾಗಿ ಆರೋಪ